ಟೆಲ್ ಅವೀವ್(ಇಸ್ರೇಲ್): ಕಳೆದ ತಿಂಗಳು ಐಡಿಎಫ್ ಫೈಟರ್ ಜೆಟ್ಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ಮಿಲಿಟರಿ ನಾಯಕ ಮುಹಮ್ಮದ್ ದೀಫ್ ಅವರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಗುರುವಾರ ದೃಢಪಡಿಸಿದೆ.
"ಜುಲೈ 13ರಂದು, ಐಡಿಎಫ್ ಫೈಟರ್ ಜೆಟ್ಗಳು ಖಾನ್ ಯೂನಿಸ್ ಪ್ರದೇಶದಲ್ಲಿ ದಾಳಿ ನಡೆಸಿದ್ದವು. ದಾಳಿಯ ನಂತರ ನಡೆಸಲಾದ ಗುಪ್ತಚರ ಮೌಲ್ಯಮಾಪನದ ಪ್ರಕಾರ, ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಮಾಸ್ಟರ್ಮೈಂಡ್, ಗಾಜಾದಲ್ಲಿನ ಭಯೋತ್ಪಾದಕ ಸಂಘಟನೆ ಹಮಾಸ್ನ ಕಮಾಂಡರ್ ಮೊಹಮ್ಮದ್ ದೀಫ್ ಈ ದಾಳಿಯಲ್ಲಿ ಹತರಾಗಿರುವುದು ದೃಢಪಟ್ಟಿದೆ" ಎಂದು ಐಡಿಎಫ್ ಗುರುವಾರ ಹೇಳಿದೆ.
ಐಡಿಎಫ್ ಮತ್ತು ಇಸ್ರೇಲಿ ಭದ್ರತಾ ಸಂಸ್ಥೆ ಶಿನ್ ಬೆಟ್ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದವು. "ಅಮ್ಮಾನ್ ಮತ್ತು ಶಿನ್ ಬೆಟ್ನ ನಿಖರವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಖಾನ್ ಯೂನಿಸ್ ಬ್ರಿಗೇಡ್ನ ಕಮಾಂಡರ್ ದೀಫ್ ಮತ್ತು ರಫೆ ಸಲಾಮಾ ಅಡಗಿದ್ದ ಕಾಂಪೌಂಡ್ ಮೇಲೆ ನಡೆಸಲಾದ ದಾಳಿಯಲ್ಲಿ ಇಬ್ಬರೂ ಕೊಲ್ಲಲ್ಪಟ್ಟಿದ್ದಾರೆ. ಅವರೊಂದಿಗೆ, ಇತರ ಭಯೋತ್ಪಾದಕರು ಸಹ ಹತರಾಗಿದ್ದಾರೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಐಡಿಎಫ್ ಪ್ರಕಾರ, ಗಾಜಾ ಪಟ್ಟಿಯಲ್ಲಿ ಹಮಾಸ್ನ ಭಯೋತ್ಪಾದಕ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದ ಡೀಫ್, ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ವಿರುದ್ಧ ಅನೇಕ ಭಯೋತ್ಪಾದಕ ಸಂಚುಗಳನ್ನು ಯೋಜಿಸಿ ಕಾರ್ಯಗತಗೊಳಿಸಿದ್ದಾನೆ ಹಾಗೂ ಸಂಘಟನೆಯ ಹಿರಿಯ ಮಿಲಿಟರಿ ವಿಭಾಗಕ್ಕೆ ಆದೇಶಗಳು ಮತ್ತು ಸೂಚನೆಗಳನ್ನು ನೀಡಿದ್ದಾನೆ.