ಸಾವೊ ಪಾಲೊ( ಬ್ರೆಜಿಲ್):ದೇಶದಲ್ಲಿ ಕಾನೂನು ಪ್ರತಿನಿಧಿಯನ್ನು ನೇಮಿಸಲು ಟೆಸ್ಲಾ ಸಿಇಒ ನಿರಾಕರಿಸಿದ ಹಿನ್ನೆಲೆ ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಅವರ ಸಾಮಾಜಿಕ ಜಾಲತಾಣ ಎಕ್ಸ್ ಅನ್ನು ತನ್ನ ದೇಶದಲ್ಲಿ ಅಮಾನತುಗೊಳಿಸುವಂತೆ ಬ್ರೆಜಿಲ್ನ ಸುಪ್ರೀಂ ಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿ ಅಲೆಕ್ಸಾಂಡ್ರೆ ಡಿ ಮೊರೇಸ್ ಶುಕ್ರವಾರ ಎಕ್ಸ್ಗೆ ಪ್ರವೇಶವನ್ನು ನಿರ್ಬಂಧಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರು ಹಾಗೂ ಅಪ್ಲಿಕೇಶನ್ ಸ್ಟೋರ್ಗಳಿಗೆ ಐದು ದಿನಗಳ ಕಾಲಾವಕಾಶ ನೀಡಿದರು. ಹಾಗೂ ತನ್ನ ಆದೇಶಗಳನ್ನು ಪಾಲಿಸುವವರೆಗೆ ಎಕ್ಸ್ ಫ್ಲಾಟ್ಫಾರ್ಮ್ ಅನ್ನು ನಿರ್ಬಂಧಿಸಲಾಗುತ್ತದೆ. ಜೊತೆಗೆ ಎಕ್ಸ್ ಅನ್ನು ಪ್ರವೇಶಿಸಲು ವರ್ಚುಯಲ್ ಖಾಸಗಿ ನೆಟ್ವರ್ಕ್ಗಳು ಅಥವಾ ವಿಪಿಎನ್ಗಳನ್ನು ಬಳಸುವ ಜನರು ಅಥವಾ ಕಂಪನಿಗಳಿಗೆ ದೈನಂದಿನ 50,000 ರಿಯಾಸ್ ದಂಡ ವಿಧಿಸಲಾಗುವುದು ಎಂದು ಹೇಳಿದರು.
ಈ ಕ್ರಮವು ಸಾರ್ವಜನಿಕರ ಅಭಿಪ್ರಾಯವನ್ನು ಕೆರಳಿಸುವ ಸಾಧ್ಯತೆಯಿದೆ. ಏಕೆಂದರೆ 20 ಮಿಲಿಯನ್ ಬ್ರೆಜಿಲಿಯನ್ನರು ನಿಯಮಿತವಾಗಿ ಎಕ್ಸ್ ವೇದಿಕೆಯನ್ನು ಬಳಸುತ್ತಿದ್ದಾರೆ.
ಜಸ್ಟಿಸ್ ಅಲೆಕ್ಸಾಂಡ್ರೆ ಡಿ ಮೊರೇಸ್ ಬುಧವಾರ ರಾತ್ರಿ, ಮಸ್ಕ್ ಅವರು ಪ್ರತಿನಿಧಿಯನ್ನು ನೇಮಿಸುವ ತನ್ನ ಆದೇಶವನ್ನು ಅನುಸರಿಸಲು ವಿಫಲವಾದರೆ ಬ್ರೆಜಿಲ್ನಲ್ಲಿ ಎಕ್ಸ್ ವೇದಿಕೆಯನ್ನು ನಿರ್ಬಂಧಿಸಲಾಗುವುದು ಎಂದು ಎಚ್ಚರಿಸಿದ್ದರು. ಜೊತೆಗೆ 24 ಗಂಟೆಗಳ ಗಡುವನ್ನು ಕೂಡಾ ನೀಡಿದ್ದರು. ಆಗಸ್ಟ್ ತಿಂಗಳ ಆರಂಭದಿಂದಲೂ ಸಾಮಾಜಿಕ ಮಾಧ್ಯಮ ವೇದಿಕೆಯು ತನ್ನ ಸ್ಥಳೀಯ ಪ್ರತಿನಿಧಿಗಳಿಲ್ಲದೆಯೇ ಇದೆ. ಎಚ್ಚರಿಕೆಯ ನಂತರವೂ ಮಸ್ಕ್ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ.
ಬ್ರೆಜಿಲ್ನ ಸಾರ್ವಭೌಮತ್ವ ಮತ್ತು ನ್ಯಾಯಾಂಗವನ್ನು ಕಡೆಗಣಿಸಿದ್ದಕ್ಕಾಗಿ ಮಸ್ಕ್ ಅವರನ್ನು ಟೀಕಿಸಿದ ಡಿ ಮೊರೇಸ್, ರಾಷ್ಟ್ರೀಯ ಕಾನೂನುಗಳ ಮೇಲೆ ತನ್ನನ್ನು ತಾನು ಸ್ಥಾನಿಕಗೊಳಿಸಿಕೊಂಡಿದ್ದಾನೆ ಎಂದು ವಿವರಿಸಿದರು.
2022ರಲ್ಲಿ ಮಸ್ಕ್ ಹಿಂದಿನ ಟ್ವಿಟರ್ ಅನ್ನು ಖರೀದಿಸಿದಾಗಿನಿಂದ ಜಾಹೀರಾತುದಾರರ ನಷ್ಟದೊಂದಿಗೆ ಹೆಣಗಾಡುತ್ತಿದ್ದ ಈಗಿನ ಎಕ್ಸ್ಗೆ ಬ್ರೆಜಿಲ್ ಪ್ರಮುಖ ಮಾರುಕಟ್ಟೆಯಾಗಿದೆ. ಮಾರುಕಟ್ಟೆ ಸಂಶೋಧನಾ ಗುಂಪು ಎಮಾರ್ಕೆಟರ್ ಪ್ರಕಾರ, ಸುಮಾರು 40 ಮಿಲಿಯನ್ ಬ್ರೆಜಿಲಿಯನ್ನರು, ಜನಸಂಖ್ಯೆಯ ಸರಿಸುಮಾರು ಐದನೇ ಒಂದು ಭಾಗ, ತಿಂಗಳಿಗೆ ಒಮ್ಮೆಯಾದರೂ X ಅನ್ನು ಬಳಕೆ ಮಾಡುತ್ತಾರೆ.
ಇದನ್ನೂ ಓದಿ:ಡೊನಾಲ್ಡ್ ಟ್ರಂಪ್ 'ಎಕ್ಸ್' ಸಂದರ್ಶನದ ಮೇಲೆ ಸೈಬರ್ ದಾಳಿ: ಮಸ್ಕ್ ಜೊತೆಗಿನ ಇಂಟರ್ವ್ಯೂನಲ್ಲಿ ವಿರೋಧಿಗಳ ಬಗ್ಗೆ ಟ್ರಂಪ್ ಮೃದು ಮಾತು - Donald Trump Elon Musk Interview