ಲಂಡನ್: ಇಂಗ್ಲೆಂಡ್‌ನ ಜಾನ್ ಆಲ್‌ಫ್ರೆಡ್ ಟಿನ್ನಿಸ್‌ವುಡ್ ವಿಶ್ವದ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ಸುದೀರ್ಘ ಜೀವನದ ರಹಸ್ಯವನ್ನು ಇವರು ಈ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ. ಇದು ನನ್ನ ಅದೃಷ್ಟವೇ ಸರಿ. ಪ್ರತಿ ಶುಕ್ರವಾರ ಹಿತಮಿತವಾಗಿ ಮೀನು ಹಾಗೂ ಚಿಪ್ಸ್ ತಿನ್ನುವುದೇ ನನ್ನ ಬದುಕಿನ ರಹಸ್ಯ ಎಂದು ಅವರು ಹೇಳಿದ್ದಾರೆ.
111 ವರ್ಷದ ಟಿನ್ನಿಸ್‌ವುಡ್ ತಮ್ಮ ಜೀವಿತಾವಧಿಯಿಂದಲೇ ಗಿನ್ನೆಸ್ ವಿಶ್ವದಾಖಲೆ ಪುಟ ಸೇರಿದವರು. ಇವರನ್ನು ವಿಶ್ವದ ಹಿರಿಯ ವ್ಯಕ್ತಿ ಎಂದು ಘೋಷಿಸಲಾಗಿದೆ. ಇದುವರೆಗೆ ಈ ದಾಖಲೆಯನ್ನು ವೆನೆಜುವೆಲಾದ 114 ವರ್ಷದ ಜುವಾನ್ ವಿಸೆಂಟೆ ಪ್ರೆಜ್ ಮತ್ತು ಜಪಾನ್‌ನ 112 ವರ್ಷದ ಗಿಸಾಬುರೊ ಸೊನೊಬೆ ಹೊಂದಿದ್ದರು. ಮಾರ್ಚ್ 31ರಂದು ಗಿಸಾಬುರೊ ನಿಧನರಾದರೆ, ಇದೇ ತಿಂಗಳು ಪ್ರೆಜ್ ಇಹಲೋಕ ತ್ಯಜಿಸಿದರು. ಹೀಗಾಗಿ ಈಗ ವಿಶ್ವದ ಹಿರಿಯ ವ್ಯಕ್ತಿಯ ಸ್ಥಾನವನ್ನು ಟಿನ್ನಿಸ್‌ವುಡ್ ತುಂಬಿದ್ದಾರೆ.
ಗುರುವಾರ ವಾಯುವ್ಯ ಇಂಗ್ಲೆಂಡ್‌ನ ಸೌತ್‌ಪೋರ್ಟ್‌ನಲ್ಲಿರುವ ಕೇರ್ ಹೋಮ್‌ನಲ್ಲಿ ಇವರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಿಂದ ವಿಶ್ವದ ಹಿರಿಯ ವ್ಯಕ್ತಿ ಎಂಬ ಪ್ರಮಾಣಪತ್ರವನ್ನು ಸ್ವೀಕರಿಸಿದರು. ವಿಶೇಷವೆಂದರೆ, ಟಿನ್ನಿಸ್‌ವುಡ್ ಅವರೊಂದಿಗೆ ಟೈಟಾನಿಕ್ ಹಡಗು ದುರಂತ ತಳಕು ಹಾಕಿಕೊಂಡಿದೆ. 1912ರಲ್ಲಿ ಟೈಟಾನಿಕ್ ಮುಳುಗಿದ ಕೆಲವು ತಿಂಗಳ ನಂತರ, ಆಗಸ್ಟ್ 26ರಂದು ಲಿವರ್‌ಪೂಲ್‌ನಲ್ಲಿ ಟಿನ್ನಿಸ್‌ವುಡ್ ಜನಿಸಿದ್ದಾರೆ.