ಜೆರುಸಲೆಂ(ಇಸ್ರೇಲ್):ಮಂಗಳವಾರ ನಡೆಸಿದ ದಾಳಿಯಲ್ಲಿ ಹೆಜ್ಬುಲ್ಲಾದ ಹಿರಿಯ ಯುಎವಿ ಕಮಾಂಡರ್ ಸಾವನ್ನಪ್ಪಿರುವುದನ್ನು ಇಸ್ರೇಲಿ ರಕ್ಷಣಾ ಪಡೆ ದೃಢಪಡಿಸಿದೆ. ಭಯೋತ್ಪಾದಕ ಗುಂಪಿನ ಮಾನವರಹಿತ ವೈಮಾನಿಕ ವಾಹನಗಳನ್ನು ಮೇಲ್ವಿಚಾರಣೆ ಮಾಡುವ ಹೆಜ್ಬುಲ್ಲಾದ ಘಟಕ 127ಳನ್ನು ತೊಡೆದುಹಾಕಲು ಇಸ್ರೇಲ್ ರಕ್ಷಣಾ ಪಡೆಗಳು ಪ್ರತಿಜ್ಞೆ ಮಾಡಿದ್ದವು. ಈ ಬೆನ್ನಲ್ಲೇ ಇಸ್ರೇಲ್ ಹೆಜ್ಬುಲ್ಲಾ ಕಮಾಂಡರ್ ಸಾವಿನ ಕುರಿತು ಘೋಷಿಸಿದೆ.
ಹತ್ಯೆಯಾದ ಕಮಾಂಡರ್ನ್ನು ಖಾದರ್ ಅಲ್-ಅಬೇದ್ ಬಹ್ಜಾ ಎಂದು ಗುರುತಿಸಲಾಗಿದೆ. ಅಬೇದ್ ಬಹ್ಜಾ ಲಿಟಾನಿ ನದಿಯ ಉತ್ತರಕ್ಕೆ ಹಿಜ್ಬುಲ್ಲಾ ವೈಮಾನಿಕ ಘಟಕದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದನು. ಆದರೆ, ಆತನ ಸಾವು ಎಲ್ಲಿ ಅಥವಾ ಯಾವಾಗ ಕೊಲ್ಲಲ್ಪಟ್ಟನು ಎಂಬುದನ್ನು ಇಸ್ರೇಲ್ ತನ್ನ ಮಾಹಿತಿಯಲ್ಲಿ ಸ್ಪಷ್ಟಪಡಿಸಿಲ್ಲ.
ಹತ್ಯೆಯಾಗಿರುವ ಖಾದರ್ ಅಲ್-ಅಬೇದ್ ಬಹ್ಜಾ ನೇತೃತ್ವದಲ್ಲಿ ಯುಎವಿಗಳು, ಕಣ್ಗಾವಲು ವಿಮಾನಗಳು ಮತ್ತು ಸ್ಫೋಟಕ ವಿಮಾನಗಳನ್ನು ಬಳಸಿಕೊಂಡು ಇಸ್ರೇಲಿ ನಾಗರಿಕರು ಮತ್ತು ಇಸ್ರೇಲಿ ರಕ್ಷಣಾ ಪಡೆಗಳ ವಿರುದ್ಧ ಹಲವಾರು ವೈಮಾನಿಕ ದಾಳಿಗಳನ್ನು ನಡೆಸಲಾಗಿತ್ತು ಎಂದು ಇಸ್ರೇಲಿ ರಕ್ಷಣಾ ಪಡೆ ಹೇಳಿದೆ.
ಭಾನುವಾರ ರಾತ್ರಿ ಕೇಂದ್ರ ಬಿನ್ಯಾಮಿನ್ ಪ್ರದೇಶದ ಸೇನಾ ನೆಲೆಯ ಊಟದ ಕೋಣೆಗೆ ಡ್ರೋನ್ ಬಡಿದು ನಾಲ್ವರು ಸೈನಿಕರು ಸಾವನ್ನಪ್ಪಿದ್ದರು ಮತ್ತು ಸುಮಾರು 60 ಮಂದಿ ಗಾಯಗೊಂಡಿದ್ದರು. ಈ ದಾಳಿಯಿಂದ ಮತ್ತಷ್ಟು ಕೆರಳಿರುವ ಇಸ್ರೇಲ್ ಹೆಜ್ಬುಲ್ಲಾದ ಘಟಕ 127ನ್ನು ನಾಶಪಡಿಸುವುದು ಅಗತ್ಯವೆಂದು ಎಂದು ಇಸ್ರೇಲಿ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದರು. ಅದರಂತೆ ಸದ್ಯ ನಡೆಸಿರುವ ದಾಳಿಯಲ್ಲಿ ಹೆಜ್ಬುಲ್ಲಾದ ಹಿರಿಯ ಯುಎವಿ ಕಮಾಂಡರ್ನ್ನು ಹತ್ಯೆ ಮಾಡಲಾಗಿದೆ.
ಅಕ್ಟೋಬರ್ 7, 2023ರ ಹಮಾಸ್ ದಾಳಿಯ ನಂತರ, ಇರಾನ್ ಬೆಂಬಲಿತ ಹೆಜ್ಬುಲ್ಲಾ ಪ್ರತಿದಿನ ಉತ್ತರ ಇಸ್ರೇಲ್ ಸಮುದಾಯಗಳ ಮೇಲೆ ರಾಕೆಟ್‌ಗಳನ್ನು ಮತ್ತು ಡ್ರೋನ್‌ಗಳನ್ನು ಉಡಾಯಿಸುತ್ತಿದೆ. ಸೆಪ್ಟೆಂಬರ್ 29 ರಂದು ಸರ್ಕಾರ ಬಿಡುಗಡೆ ಮಾಡಿದ ಅಂಕಿ - ಅಂಶಗಳ ಪ್ರಕಾರ, ಉತ್ತರ ಇಸ್ರೇಲ್ನ 68,000ಕ್ಕೂ ಹೆಚ್ಚು ನಿವಾಸಿಗಳು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ. ಇಸ್ರೇಲಿಗಳು ತಮ್ಮ ಮನೆಗಳಿಗೆ ಹಿಂತಿರುಗುವುದನ್ನು ತಡೆಯಲು ಇದೇ ದಾಳಿಯನ್ನು ಮುಂದುವರಿಸುವುದಾಗಿ ಹೆಜ್ಬುಲ್ಲಾ ನಾಯಕರು ಮತ್ತೆ ಮತ್ತೆ ಹೇಳಿದ್ದಾರೆ.
2006ರ ಎರಡನೇ ಲೆಬನಾನ್ ಯುದ್ಧವನ್ನು ಕೊನೆಗೊಳಿಸಿದ ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ ರೆಸಲ್ಯೂಶನ್ 1701ರ ಪ್ರಕಾರ, ಭಯೋತ್ಪಾದಕ ಗುಂಪು ದಕ್ಷಿಣ ಲೆಬನಾನ್‌ನಲ್ಲಿ ಲಿಟಾನಿ ನದಿಯ ದಕ್ಷಿಣದಲ್ಲಿ ಕಾರ್ಯನಿರ್ವಹಿಸುವುದನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ:ಇಸ್ರೇಲ್ ದಾಳಿಗೆ ಲೆಬನಾನ್ನ ಶಾಲೆಗಳು ಬಂದ್, 4 ಲಕ್ಷ ಮಕ್ಕಳ ಶಿಕ್ಷಣದ ಮೇಲೆ ಹೊಡೆತ: ವಿಶ್ವಸಂಸ್ಥೆ