ವಿಶ್ವಸಂಸ್ಥೆ: ತನ್ನ ದೇಶದಲ್ಲಿ ನಕಲಿ ಚುನಾವಣೆಗಳನ್ನು ನಡೆಸುವ ಪಾಕಿಸ್ತಾನ, ಕಾಶ್ಮೀರದಲ್ಲಿ ಜನತೆ ಮುಕ್ತವಾಗಿ ಮತ ಚಲಾಯಿಸಿ ತಮ್ಮ ನಾಯಕರನ್ನು ಆಯ್ಕೆ ಮಾಡಿರುವುದನ್ನು ನೋಡಿ ಇಸ್ಲಾಮಾಬಾದ್ಗೆ ನಿರಾಸೆಯಾಗಿದೆ ಎಂದು ಭಾರತ ಹೇಳಿದೆ.
"ನಕಲಿ ಚುನಾವಣೆಗಳನ್ನು ನಡೆಸುವುದು, ವಿರೋಧ ಪಕ್ಷದ ನಾಯಕರನ್ನು ಬಂಧಿಸುವುದು ಮತ್ತು ರಾಜಕೀಯ ವಿರೋಧೀಗಳ ಧ್ವನಿಗಳನ್ನು ಹತ್ತಿಕ್ಕುವುದು ಪಾಕಿಸ್ತಾನಕ್ಕೆ ಅಭ್ಯಾಸವಾಗಿದೆ. ಕಾಶ್ಮೀರದಲ್ಲಿ ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಯಾಗಿರುವುದನ್ನು ನೋಡಿ ಪಾಕಿಸ್ತಾನ ನಿರಾಶೆಗೊಳ್ಳುವುದು ಸಹಜ" ಎಂದು ಭಾರತದ ವಿಶ್ವಸಂಸ್ಥೆ ಮಿಷನ್ನ ಸಲಹೆಗಾರ ಎಲ್ಡೋಸ್ ಮ್ಯಾಥ್ಯೂ ಪುನ್ನೂಸ್ ಸೋಮವಾರ ಹೇಳಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಿಶೇಷ ರಾಜಕೀಯ ಮತ್ತು ವಸಾಹತು ವಿಮೋಚನಾ ಸಮಿತಿ ಸಭೆಯಲ್ಲಿ ಪಾಕಿಸ್ತಾನದ ಖಾಯಂ ಪ್ರತಿನಿಧಿ ಮುನೀರ್ ಅಕ್ರಮ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಆ ದೇಶದ ಕಳಂಕಿತ ಪ್ರಜಾಪ್ರಭುತ್ವದ ಇತಿಹಾಸವನ್ನು ನೋಡಿದರೆ, ಪಾಕಿಸ್ತಾನವು ನಿಜವಾದ ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಮೋಸವೆಂದು ಪರಿಗಣಿಸುತ್ತದೆ" ಎಂದು ಹೇಳಿದರು.
"ಕಳೆದ ವಾರವಷ್ಟೇ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಫಲಿತಾಂಶಗಳನ್ನು ಘೋಷಿಸಲಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಲಕ್ಷಾಂತರ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ ಮತ್ತು ಸಾಂವಿಧಾನಿಕ ಚೌಕಟ್ಟು ಮತ್ತು ಸಾರ್ವತ್ರಿಕ ವಯಸ್ಕ ಮತದಾನ ಪ್ರಕ್ರಿಯೆಯ ಪ್ರಕಾರ ತಮ್ಮ ನಾಯಕತ್ವವನ್ನು ಆಯ್ಕೆ ಮಾಡಿದ್ದಾರೆ. ಈ ಪ್ರಕ್ರಿಯೆಗಳು ಪಾಕಿಸ್ತಾನಕ್ಕೆ ಖಂಡಿತವಾಗಿಯೂ ಅಪರಿಚಿತ" ಎಂದು ಅವರು ಹೇಳಿದರು.
ಪಾಕಿಸ್ತಾನ ಮೊದಲಿಗೆ ಆಕ್ರಮಿತ ಜಮ್ಮು, ಕಾಶ್ಮೀರ ಮತ್ತು ಲಡಾಖ್ (ಪಿಒಜೆಕೆಎಲ್) ನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯನ್ನು ನಿಲ್ಲಿಸುವಂತೆ ಪುನೂಸ್ ಪಾಕಿಸ್ತಾನಕ್ಕೆ ತಿವಿದರು. "ಪಾಕಿಸ್ತಾನವು ಹಗಲು ರಾತ್ರಿ ನಡೆಸುವ ವಿಭಜಕ ಚಟುವಟಿಕೆಗಳಿಗೆ ಜಗತ್ತು ಸಾಕ್ಷಿಯಾಗಿದೆ" ಎಂದು ಅವರು ಹೇಳಿದರು.
"ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ಮತ್ತು ಬಹುರಾಷ್ಟ್ರೀಯ ಅಪರಾಧಗಳಿಗೆ ವಿಶ್ವದಾದ್ಯಂತ ಕುಖ್ಯಾತವಾಗಿರುವ ದೇಶವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ವಿರುದ್ಧ ಆರೋಪ ಮಾಡುತ್ತಿರುವುದು ವಿಪರ್ಯಾಸ" ಎಂದು ಪುನೂಸ್ ತಿಳಿಸಿದರು.
ಇದಕ್ಕೂ ಮುನ್ನ ನಾಲ್ಕನೇ ಸಮಿತಿ ಎಂದೂ ಕರೆಯಲ್ಪಡುವ ಈ ಸಮಿತಿಯ ಸಭೆಯಲ್ಲಿ ವಸಾಹತು ವಿಮೋಚನೆ ಕುರಿತ ಚರ್ಚೆಯಲ್ಲಿ ಮಾತನಾಡಿದ ಅಕ್ರಮ್, ಕಾಶ್ಮೀರದಲ್ಲಿನ ಚುನಾವಣೆಗಳನ್ನು "ಮೋಸ" ಎಂದು ಕರೆದಿದ್ದರು.
2019 ರಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ನಡೆದ ಮೊದಲ ಚುನಾವಣೆಯಲ್ಲಿ, ಆರು ದಶಲಕ್ಷಕ್ಕೂ ಹೆಚ್ಚು ಮತದಾರರು ಕಾಶ್ಮೀರದಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಒಕ್ಕೂಟವು ಕಾಶ್ಮೀರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಇದನ್ನೂ ಓದಿ: ಪರಸ್ಪರ ಗೌರವದ ಆಧಾರದ ಮೇಲೆ ಸಹಕಾರ ಇರಬೇಕು: ಇಸ್ಲಾಮಾಬಾದ್ನಲ್ಲಿ ಜೈಶಂಕರ್ ಪ್ರತಿಪಾದನೆ