ಪೋರ್ಟ್ ಸುಡಾನ್: ಸ್ಥಳಾಂತರಗೊಂಡಿರುವ ಸಾವಿರಾರು ಜನರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ನೆರವು ನೀಡಬೇಕೆಂದು ಸುಡಾನ್ನ ರೆಡ್ ಸೀ ಪ್ರಾಂತ್ಯದ ಸರ್ಕಾರವು ಅಂತಾರಾಷ್ಟ್ರೀಯ ಸಮುದಾಯ ಮತ್ತು ಮಾನವೀಯ ಸಂಸ್ಥೆಗಳಿಗೆ ಮನವಿ ಮಾಡಿದೆ.
"ಪ್ರಾಂತ್ಯದಲ್ಲಿ ಅತ್ಯಧಿಕ ಸಂಖ್ಯೆಯ ಸ್ಥಳಾಂತರಗೊಂಡ ಜನರಿದ್ದು, ಇವರ ಸಂಖ್ಯೆ ಇನ್ನೂ ಹೆಚ್ಚುತ್ತಿದೆ" ಎಂದು ರೆಡ್ ಸೀ ಪ್ರಾಂತ್ಯದ ಸಮಾಜ ಕಲ್ಯಾಣ ಸಚಿವ ಇಲ್ಹಾಮ್ ಇಡ್ರಿಸ್ ಗಸ್ಮಾಲ್ಲಾ ಹೇಳಿದರು.
"ಇಷ್ಟೊಂದು ದೊಡ್ಡ ಸಂಖ್ಯೆಯ ಜನರಿಗೆ ನಾವು ಸಾಧ್ಯವಿರುವ ಎಲ್ಲ ಸಹಾಯ ಮಾಡುತ್ತೇವೆ. ಆದರೆ, ಅವರಿಗೆ ಅಗತ್ಯ ಇರುವುದೆಲ್ಲವನ್ನೂ ನೀಡಲು ಸಾಧ್ಯವಾಗುತ್ತಿಲ್ಲ. ಈ ಕೊರತೆ ನೀಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ಅವರು ಹೇಳಿದರು. ಸ್ಥಳಾಂತರಗೊಂಡವರಿಗೆ ಆಶ್ರಯ ಸಾಮಗ್ರಿಗಳು, ವೈದ್ಯಕೀಯ ಸರಬರಾಜು ಮತ್ತು ಪರಿಸರ ನೈರ್ಮಲ್ಯ ಸಂಪನ್ಮೂಲಗಳ ತುರ್ತು ಅಗತ್ಯ ಒತ್ತಿ ಹೇಳಿದ ಗಸ್ಮಾಲ್ಲಾ ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದರು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ಟೆಂಟ್ಗಳ ಕೊರತೆ ತೀವ್ರವಾಗಿದೆ ಮತ್ತು ರೆಡ್ ಸೀ ಪ್ರಾಂತ್ಯದಲ್ಲಿ ಇಷ್ಟರಲ್ಲೇ ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ, ನೈರ್ಮಲ್ಯ ಮತ್ತು ರೋಗ ನಿಯಂತ್ರಣಕ್ಕೆ ಅಗತ್ಯ ವಸ್ತುಗಳ ಪೂರೈಕೆಗಳ ಜೊತೆಗೆ ಜ್ವರದಂಥ ಸೀಸನಲ್ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ನಮಗೆ ತುರ್ತಾಗಿ ಔಷಧಗಳ ಅಗತ್ಯವಿದೆ" ಎಂದು ಅವರು ಹೇಳಿದರು.