ಕರ್ನಾಟಕ

karnataka

ETV Bharat / international

ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಚುನಾವಣೆಯಲ್ಲಿಇಬ್ಬರು ಕನ್ನಡಿಗರು ​ಸೇರಿ ಆರು ಭಾರತೀಯ ಅಮೆರಿಕನ್​​ರಿಗೆ ಗೆಲುವು - KANNADIGA WIN IN AMERICA ELECTION

ಬೆಳಗಾವಿ ಮೂಲದ ಥಾಣೇದಾರ್​, ಬೆಂಗಳೂರು ಮೂಲದ ಸುಹಾಸ್ ಸುಬ್ರಮಣ್ಯಂ ಸೇರಿದಂತೆ ಆರು ಭಾರತೀಯ ಅಮೆರಿಕನ್ನರು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ ಗೆ ಚುನಾಯಿತರಾಗಿದ್ದಾರೆ. ಸುಬ್ರಹ್ಮಣ್ಯಂ ವರ್ಜೀನಿಯಾ, ಪೂರ್ವ ಕರಾವಳಿಯಿಂದ ಮೊದಲಿಗರಾಗಿ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ.

ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಚುನಾವಣೆಯಲ್ಲಿ ಕನ್ನಡಿಗ ಸೇರಿ ಆರು ಭಾರತೀಯರಿಗೆ ಗೆಲುವು
Six Indian Americans Win Elections Of Us House Of Representatives (AP)

By ETV Bharat Karnataka Team

Published : Nov 6, 2024, 7:32 PM IST

Updated : Nov 6, 2024, 8:33 PM IST

ವಾಷಿಂಗ್ಟನ್, ಅಮೆರಿಕ: ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ನಡೆದ ಚುನಾವಣೆಯಲ್ಲಿ ಕನ್ನಡಿಗ ಸೇರಿ ಆರು ಭಾರತೀಯ ಅಮೆರಿಕನ್ನರು ಗೆದ್ದಿದ್ದಾರೆ. ಪ್ರಸ್ತುತ ಕಾಂಗ್ರೆಸ್‌ನಲ್ಲಿ ಅವರ ಸಂಖ್ಯೆಯನ್ನ ಹೆಚ್ಚಿಸಿಕೊಂಡಿದ್ದಾರೆ. ಅರಿಜೋನಾದ ಮೊದಲ ಕಾಂಗ್ರೆಷನಲ್ ಡಿಸ್ಟ್ರಿಕ್ಟ್‌ನಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯ ವಿರುದ್ಧ ಡಾ.ಅಮಿಶ್ ಷಾ ಅವರು ತೆಳು ಅಂತರದಿಂದ ಮುನ್ನಡೆ ಸಾಧಿಸಿದ್ದರಿಂದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಭಾರತೀಯ ಅಮೆರಿಕನ್ನರ ಸಂಖ್ಯೆ ಏಳಕ್ಕೆ ಏರುವ ಸಾಧ್ಯತೆಯಿದೆ.

ಮಿಚಿಗನ್​ನಿಂದ ಭಾರತೀಯ ಮೂಲದ ಅಮೆರಿಕನ್​ ಉದ್ಯಮಿಯಾಗಿರುವ ರಾಜಕಾರಣಿ ಥಾಣೇಧಾರ್​​ ಆಯ್ಕೆಯಾಗಿದ್ದು, ಇಲ್ಲಿಂದ ಗೆಲುವು ಕಂಡ ಮೊದಲ ಭಾರತೀಯ ಅಮೆರಿಕನ್​ ಪ್ರಜೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮಿಚಿಗನ್‌ನ 13 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್‌ನಿಂದ ಸತತ ಎರಡನೇ ಅವಧಿಗೆ ಮರು ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಥಾಣೇದಾರ್​ ಬೆಳಗಾವಿಯವರು: ಥಾಣೇದಾರ್ ಬೆಳಗಾವಿಯಲ್ಲಿ ಹುಟ್ಟಿ ಬೆಳೆದವರು. ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಹಲವು ಕೆಲಸಗಳನ್ನು ಮಾಡಿ ಕುಟುಂಬ ನಿರ್ವಹಣೆ ಮಾಡಿದ್ದಾರೆ. ಅವರ ತಂದೆ 55 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಿದಾಗ, 14 ವರ್ಷದ ಥಾಣೇದಾರ್ ತನ್ನ ಎಂಟು ಜನರ ಕುಟುಂಬವನ್ನು ಪೋಷಿಸಲು ಬೇರೆ ಬೇರೆ ಕೆಲಸಗಳನ್ನು ಮಾಡಬೇಕಾಯಿತು.

ಇಷ್ಟರ ನಡುವೆ 18 ನೇ ವಯಸ್ಸಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದ ಇವರು, ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1979 ರಲ್ಲಿ ಅಮೆರಿಕಕ್ಕೆ ಬಂದ ಇವರು ಅಕ್ರಾನ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡಿದರು. 1982 ರಲ್ಲಿ ಪಿಎಚ್​​​​ಡಿ ಪದವಿ ಪಡೆದುಕೊಂಡರು. 1988 ರಿಂದ ಅಮೆರಿಕ ಪ್ರಜೆಯಾದರು.

ಭಾರತೀಯ-ಅಮೆರಿಕನ್ ವಕೀಲ ಸುಹಾಸ್ ಸುಬ್ರಮಣ್ಯಂ ವರ್ಜೀನಿಯಾ ಮತ್ತು ಇಡೀ ಪೂರ್ವ ಕರಾವಳಿಯಿಂದ ಚುನಾಯಿತರಾದ ಸಮುದಾಯದಿಂದ ಮೊದಲಿಗರಾಗಿ ಇತಿಹಾಸ ನಿರ್ಮಿಸಿದ್ದಾರೆ. ಸುಬ್ರಮಣ್ಯನ್ ಅವರು ರಿಪಬ್ಲಿಕನ್ ಪಕ್ಷದ ಮೈಕ್ ಕ್ಲಾನ್ಸಿ ಅವರನ್ನು ಸೋಲಿಸಿ ಆಯ್ಕೆ ಆಗಿದ್ದಾರೆ. ಅವರು ಪ್ರಸ್ತುತ ವರ್ಜೀನಿಯಾ ರಾಜ್ಯದ ಸೆನೆಟರ್ ಆಗಿದ್ದಾರೆ.

ನಂಬಿಕೆ ಇಟ್ಟ ಆಯ್ಕೆ ಮಾಡಿದ ಜನರಿಗೆ ಧನ್ಯವಾದ ಹೇಳಿದ ಸುಬ್ರಮಣ್ಯಂ:"ವರ್ಜೀನಿಯಾದ 10 ನೇ ಜಿಲ್ಲೆಯ ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ಗೌರವ ಮತ್ತು ವಿನಮ್ರನಾಗಿದ್ದೇನೆ. ಈ ಜಿಲ್ಲೆ ನನ್ನ ತವರು. ನಾನು ಇಲ್ಲಿ ಮದುವೆಯಾಗಿದ್ದೇನೆ, ನನ್ನ ಹೆಂಡತಿ ಮಿರಾಂಡಾ ಮತ್ತು ನಾನು ನಮ್ಮ ಹೆಣ್ಣು ಮಕ್ಕಳನ್ನು ಇಲ್ಲಿ ಬೆಳೆಸುತ್ತಿದ್ದೇವೆ. ಈ ಜಿಲ್ಲೆಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸುವುದು ನಮಗೆ ಸಿಕ್ಕ ಗೌರವವಾಗಿದೆ ಎಂದು ಸುಬ್ರಹ್ಮಣ್ಯಂ ಹೇಳಿದ್ದಾರೆ.

ಈ ಹಿಂದೆ ಅಧ್ಯಕ್ಷ ಬರಾಕ್ ಒಬಾಮಾ ಅವರ ಶ್ವೇತಭವನದ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಸುಬ್ರಮಣ್ಯಂ ಅವರು ನಂಬಿಕೆಯಿಂದ ಹಿಂದೂ ಆಗಿದ್ದಾರೆ ಮತ್ತು ರಾಷ್ಟ್ರವ್ಯಾಪಿ ಭಾರತೀಯ ಅಮೆರಿಕನ್ನರಲ್ಲಿ ಜನಪ್ರಿಯರಾಗಿದ್ದಾರೆ.

ಸುಹಾಸ್ ಸುಬ್ರಮಣ್ಯಂ ಹಿನ್ನೆಲೆ:ಹೂಸ್ಟನ್‌ನಲ್ಲಿ ಜನಿಸಿದ ಸುಬ್ರಮಣ್ಯಂ ಅವರು ಅಮೆರಿಕದ ವಕೀಲರು ಮತ್ತು ವರ್ಜೀನಿಯಾ ಸೆನೆಟ್‌ನ ಸದಸ್ಯರಾಗಿದ್ದಾರೆ. ಅವರ ತಂದೆ- ತಾಯಿ ಕರ್ನಾಟಕದ ಬೆಂಗಳೂರಿನವರು.

ಸುಬ್ರಮಣ್ಯಂ ಸೆಪ್ಟೆಂಬರ್ 26, 1986 ರಂದು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಜನಿಸಿದರು. ಅಮೆರಿಕದಲ್ಲಿರುವ ಸುಹಾಸ್ ಅವರ ತಾಯಿ ಕರ್ನಾಟಕದ ಬೆಂಗಳೂರು ಮೂಲದವರು. ತಂದೆ ಚೆನ್ನೈ ಮತ್ತು ಸಿಕಂದರಾಬಾದ್‌ನಲ್ಲಿ ಬೆಳೆದವರು.

ಸುಹಾಸ್‌ನ ಪೋಷಕರು ಚಿಕ್ಕ ವಯಸ್ಸಿನಿಂದಲೇ ಅವರಿಗೆ ಕುಟುಂಬ ಹಾಗೂ ಸೇವೆಯ ಮೌಲ್ಯವನ್ನು ಕಲಿಸಿದರು, ಜೊತೆಗೆ ಉತ್ತಮ ಶಿಕ್ಷಣದ ಜತೆಗೆ ಮೌಲ್ಯವನ್ನು ಕಲಿಸಿದರು.ಇದುವೆ ಅವರು ಅಮೆರಿಕದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಹಕಾರಿಯಾಗಿದೆ.

ಸಮೋಸಾ ಕಾಕಸ್ ಸೇರಲಿರುವ ಐವರು ಭಾರತೀಯರು:ಅವರು ಪ್ರಸ್ತುತ ಐದು ಭಾರತೀಯ ಅಮೆರಿಕನ್ನರನ್ನು ಒಳಗೊಂಡಿರುವ ಕಾಂಗ್ರೆಸ್‌ನಲ್ಲಿ 'ಸಮೋಸಾ ಕಾಕಸ್'ಗೆ ಸೇರುತ್ತಾರೆ - ಅಮಿ ಬೇರಾ, ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಪ್ರಮೀಳಾ ಜಯಪಾಲ್ ಮತ್ತು ಶ್ರೀ ಥಾಣೇದಾರ್. ಅಸ್ತಿತ್ವದಲ್ಲಿರುವ ಎಲ್ಲಾ ಐದು ಭಾರತೀಯ ಅಮೇರಿಕನ್ ಸದಸ್ಯರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಮರು ಆಯ್ಕೆಯಾಗಿದ್ದಾರೆ. ರಾಜಾ ಕೃಷ್ಣಮೂರ್ತಿ ಅವರು ಇಲಿನಾಯ್ಸ್‌ನ ಏಳನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ ಅನ್ನು ಸತತ ಐದನೇ ಅವಧಿಗೆ ಗೆದ್ದುಕೊಂಡಿದ್ದಾರೆ.

ಶ್ವೇತಭವನ ಮತ್ತು ಕಾಂಗ್ರೆಸ್‌ನ ನಿಯಂತ್ರಣಕ್ಕಾಗಿ ತುರುಸಿನ ಹೋರಾಟ ಇರುವಾಗ, ಇಲಿನಾಯ್ಸ್‌ನ 8 ನೇ ಜಿಲ್ಲೆಯ ಜನರು ಕಾಂಗ್ರೆಸ್‌ ಪ್ರತಿನಿಧಿಸಲು ನನ್ನನ್ನು ಆಯ್ಕೆ ಮಾಡಿ ಕಳುಹಿಸಿರುವುದು ನನಗೆ ಸಿಕ್ಕ ದೊಡ್ಡ ಗೌರವವಾಗಿದೆ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.

"ನನ್ನ ಹೆತ್ತವರು ಈ ದೇಶಕ್ಕೆ ಬಂದಿದ್ದು ತಮ್ಮ ಕುಟುಂಬದ ಭವಿಷ್ಯ ರೂಪಿಸಿಕೊಳ್ಳಲು. ತುಸು ಹೆಚ್ಚಿನ ಕನಸು ಮತ್ತು ಆ ಕನಸನ್ನು ಅಮೆರಿಕದಲ್ಲಿ ಸಾಧಿಸಬಹುದು ಎಂಬ ನಂಬಿಕೆಯೊಂದಿಗೆ ಇಲ್ಲಿಗೆ ಬಂದಿದ್ದರು. ಅವರ ಕನಸು ನನಸಾಗಿದೆ ಎಂದು ಕೃಷ್ಣಮೂರ್ತಿ ಸಂತಸ ವ್ಯಕ್ತಪಡಿಸಿದ್ದಾರೆ.

ಕ್ಯಾಲಿಫೋರ್ನಿಯಾದ ಹದಿನೇಳನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ ಅನ್ನು ಪ್ರತಿನಿಧಿಸುವ ರೋ ಖನ್ನಾ ಮತ್ತು ವಾಷಿಂಗ್ಟನ್ ರಾಜ್ಯದ ಏಳನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ ಅನ್ನು ಪ್ರತಿನಿಧಿಸುವ ಕಾಂಗ್ರೆಸ್ ಮಹಿಳೆ ಪ್ರಮೀಳಾ ಜಯಪಾಲ್ ಸಹ ಗೆಲುವಿಗಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿರುವ ಡಾ ಅಮಿ ಬೆರಾ ಅವರು 2013 ರಿಂದ ಕ್ಯಾಲಿಫೋರ್ನಿಯಾದ ಆರನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ ಅನ್ನು ಪ್ರತಿನಿಧಿಸುವ ಅತ್ಯಂತ ಹಿರಿಯ ಭಾರತೀಯ ಅಮೆರಿಕನ್ ಕಾಂಗ್ರೆಸ್ಸಿಗರಾಗಿದ್ದಾರೆ. ಅವರು ಸತತ ಏಳನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ.

Last Updated : Nov 6, 2024, 8:33 PM IST

ABOUT THE AUTHOR

...view details