ಟೋಕಿಯೊ: ಜಪಾನ್ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್ ಡಿಪಿ) ನಾಯಕ ಶಿಗೆರು ಇಶಿಬಾ ಅವರು ದೇಶದ ಹೊಸ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಸಂಸತ್ತಿನಲ್ಲಿ ನಡೆದ ಮತದಾನದಲ್ಲಿ ಇಶಿಬಾ ಅವರನ್ನು ಆಯ್ಕೆ ಮಾಡಲಾಯಿತು. ಇವರು ಫ್ಯೂಮಿಯೊ ಕಿಶಿಡಾ ಅವರ ಉತ್ತರಾಧಿಕಾರಿಯಾಗಲಿದ್ದಾರೆ.
ಜಪಾನ್ ಸಂಸತ್ತಿನ ಕೆಳ ಮತ್ತು ಮೇಲ್ಮನೆಗಳೆರಡೂ ಪ್ರಧಾನಿ ಸ್ಥಾನಕ್ಕಾಗಿ ಕಳೆದ ವಾರ ಎಲ್ಡಿಪಿ ಅಧ್ಯಕ್ಷ ಸ್ಥಾನವನ್ನು ಗೆದ್ದ ಇಶಿಬಾ ಅವರ ಹೆಸರನ್ನು ಅನುಮೋದಿಸಿದವು.
ಹಗರಣಗಳಿಂದ ಕುಖ್ಯಾತಿ ಪಡೆದಿರುವ ಎಲ್ಡಿಪಿಯ ಮೇಲೆ ಮತದಾರರ ವಿಶ್ವಾಸವನ್ನು ಪುನಃಸ್ಥಾಪಿಸಲು ಇಶಿಬಾ ಬಹಳ ಶ್ರಮಪಡಬೇಕಾಗಲಿದೆ. ಹೀಗಾಗಿ ಅವರ ಅಧಿಕಾರಾವಧಿಯು ಬಹಳಷ್ಟು ಸವಾಲುಗಳಿಂದ ಕೂಡಿರಲಿದೆ. ಕಳೆದ ವಾರ ನಡೆದ ಚುನಾವಣೆಯಲ್ಲಿ ಆರ್ಥಿಕ ಭದ್ರತಾ ಸಚಿವ ಸನೇ ತಕೈಚಿ ಅವರನ್ನು ಸೋಲಿಸುವ ಮೂಲಕ ಇಶಿಬಾ ತಮ್ಮ ಐದನೇ ಪ್ರಯತ್ನದಲ್ಲಿ ಎಲ್ಡಿಪಿ ನಾಯಕನಾಗಿ ವಿಜಯಶಾಲಿಯಾದರು. ಇಶಿಬಾ 215 ಮತಗಳನ್ನು ಗಳಿಸಿ 194 ಮತ ಪಡೆದ ತಕೈಚಿ ಅವರನ್ನು ಹಿಂದಿಕ್ಕಿದರು.
ಅ.27ರಂದು ಸಾರ್ವತ್ರಿಕ ಚುನಾವಣೆ: ಇದಕ್ಕೂ ಮುನ್ನ ಸೋಮವಾರ, ಇಶಿಬಾ ಅಕ್ಟೋಬರ್ 9ರಂದು ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸುವ ಯೋಜನೆಯನ್ನು ಘೋಷಿಸಿದರು. ಅಕ್ಟೋಬರ್ 27ರಂದು ಸಾರ್ವತ್ರಿಕ ಚುನಾವಣೆ ನಿಗದಿಯಾಗಿದೆ. ಹಠಾತ್ ಚುನಾವಣೆಗೆ ಕರೆ ನೀಡಿದ ಅವರ ನಿರ್ಧಾರವನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ. ಅಧಿಕೃತವಾಗಿ ಪ್ರಧಾನಿಯಾಗಿ ಆಯ್ಕೆಯಾಗುವ ಮೊದಲೇ ಇಂಥ ಘೋಷಣೆ ಮಾಡುವುದು ಅಗೌರವ ಮತ್ತು ಅಸಂವಿಧಾನಿಕ ಎಂದು ಪ್ರತಿಪಕ್ಷಗಳು ಟೀಕಿಸಿವೆ.