ಟೆಲ್ ಅವೀವ್, ಇಸ್ರೇಲ್: ಉತ್ತರ ಇಸ್ರೇಲ್ ಮೇಲೆ ಹಿಜ್ಬುಲ್ಲಾ ರಾಕೆಟ್ ದಾಳಿ ನಡೆಸಿದೆ. ಮೆಟುಲಾ ಮತ್ತು ಹೈಫಾ ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಏಳು ಜೀವಗಳು ಬಲಿಯಾಗಿವೆ. ಇದು ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ಗುರಿಯಾಗಿಸಿಕೊಂಡ ದಾಳಿಯಲ್ಲಿ ಒಂದಾಗಿದ್ದು, ನಾಗರಿಕರು ಬಲಿಯಾಗಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಗುರುವಾರ ಬೆಳಗ್ಗೆ ಗಡಿ ಪಟ್ಟಣವಾದ ಮೆಟುಲಾ ಬಳಿ ಈ ರಾಕೆಟ್ ದಾಳಿ ನಡೆದಿದೆ. ಲೆಬನಾನ್ನಿಂದ ಹಾರಿಸಲಾದ ರಾಕೆಟ್ ಇಸ್ರೇಲ್ನ ಸೇಬಿನ ತೋಟಕ್ಕೆ ಅಪ್ಪಳಿಸಿದೆ ಪರಿಣಾಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಇದಾಗಿ ಕೆಲವು ಗಂಟೆಗಳ ನಂತರ ಹೈಫಾ ಉಪನಗರವಾದ ಕಿರಿಯಾತ್ ಅಟಾದ ಹೊರಗಿನ ಆಲಿವ್ ತೋಪಿನ ಮೇಲೆ ದಾಳಿ ನಡೆದಿದೆ. ಈ ಘಟನೆಯಲ್ಲಿ ಮತ್ತಿಬ್ಬರು ಕೊಲ್ಲಲ್ಪಟ್ಟಿದ್ದಾರೆ. ಹಿಜ್ಬುಲ್ಲಾ ಆ ಪ್ರದೇಶದ ಮೇಲೆ ಡಜನ್ಗಟ್ಟಲೇ ರಾಕೆಟ್ಗಳನ್ನು ಹಾರಿಸಿದ್ದರಿಂದ ಈ ಸಾವು ಸಂಭವಿಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಹೆಜ್ಬುಲ್ಲಾ ದಾಳಿ ಖಚಿತ ಪಡಿಸಿದ ಇಸ್ರೇಲಿ ಸೇನೆ:ಇಸ್ರೇಲ್ ರಕ್ಷಣಾ ಪಡೆ ಕೂಡ ತನ್ನ ಹೇಳಿಕೆಯಲ್ಲಿ ಹಿಜ್ಬುಲ್ಲಾ ದಾಳಿಯನ್ನು ದೃಢಪಡಿಸಿದೆ. X ನಲ್ಲಿ ಪೋಸ್ಟ್ ಹಂಚಿಕೊಂಡಿರುವ IDF, ಹಿಜ್ಬುಲ್ಲಾ ರಾಕೆಟ್ಗಳು ಇಸ್ರೇಲ್ನಲ್ಲಿ 7 ಮುಗ್ಧ ನಾಗರಿಕರನ್ನು ಬಲಿ ಪಡೆದುಕೊಂಡಿವೆ. ನಾವು ಹಿಜ್ಬುಲ್ಲಾದ ಮಾರಣಾಂತಿಕ ದಾಳಿಗಳಿಗೆ ಉತ್ತರಿಸದೇ ಬಿಡುವುದಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ.