ಬ್ಯಾಂಕಾಕ್:ಬ್ಯಾಂಕಾಕ್‌ನಲ್ಲಿ ಮಂಗಳವಾರ ಭಾರಿ ಅಗ್ನಿ ದುರಂತ ಸಂಭವಿಸಿದೆ. ಪ್ರವಾಸಕ್ಕೆ ತೆರಳಿದ್ದ ಬಸ್ಸಿಗೆ ಬೆಂಕಿ ಹೊತ್ತಿಕೊಂಡು 25 ಶಾಲಾ ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. 19 ಮಂದಿಯನ್ನು ರಕ್ಷಿಸಲಾಗಿದೆ.
ಬಸ್‌ನಲ್ಲಿ ಶಿಕ್ಷಕರು ಸೇರಿದಂತೆ 44 ಮಂದಿ ಇದ್ದರು. ಶಾಲಾ ಪ್ರವಾಸಕ್ಕೆಂದು ಉತೈ ಥಾನಿ ಪ್ರಾಂತ್ಯದಿಂದ ಅಯುತಾಯಕ್ಕೆ ಹೋಗುತ್ತಿದ್ದಾಗ ರಾಜಧಾನಿ ಬ್ಯಾಂಕಾಕ್ನ ಪಥುಮ್ ಥಾನಿ ಪ್ರಾಂತ್ಯದಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಇಡೀ ಬಸ್ ಬೆಂಕಿಯ ಕೆನ್ನಾಲಿಗೆಗೆ ತುತ್ತಾಯಿತು.
44 ಮಂದಿಯ ಪೈಕಿ 19 ವಿದ್ಯಾರ್ಥಿಗಳು ಬಸ್ಸಿನಿಂದ ಇಳಿದು ಜೀವ ಉಳಿಸಿಕೊಂಡಿದ್ದಾರೆ. ಇನ್ನುಳಿದ 25 ವಿದ್ಯಾರ್ಥಿಗಳು ಬೆಂಕಿಗೆ ಸಿಲುಕಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಇಡೀ ಬಸ್ ಸುಟ್ಟು ಕರಕಲಾಗಿದೆ. ಶವಗಳು ಕೂಡ ಗುರುತು ಪತ್ತೆ ಮಾಡಲು ಸಾಧ್ಯವಾಗದಷ್ಟು ಬೆಂದು ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ಸಿಗೆ ಬೆಂಕಿ ಹೊತ್ತಿಕೊಂಡ ಮಾಹಿತಿ ತಿಳಿದ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆದರೆ, ಅಷ್ಟೊತ್ತಿಗೆ ವಿದ್ಯಾರ್ಥಿಗಳ ಪ್ರಾಣಪಕ್ಷಿ ಹಾರಿಹೋಗಿದೆ. ಘಟನಾ ಸ್ಥಳದಲ್ಲಿ ಶೋಕ ಮಡುಗಟ್ಟಿದ್ದು, ಮಕ್ಕಳ ಶವಗಳನ್ನು ಹೊರತೆಗೆಯಲಾಗುತ್ತಿದೆ.
ಬಸ್ಸಿಗೆ ಬೆಂಕಿ ಹೊತ್ತಿಕೊಂಡ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ರಸ್ತೆಯ ಮೇಲೆ ಬಸ್ ನಿಂತಿದ್ದು, ಅಗ್ನಿ ದುರಂತದಿಂದಾಗಿ ದೊಡ್ಡದಾಗಿ ಕಪ್ಪು ಹೊಗೆ ಆವರಿಸಿಕೊಂಡಿರುವುದನ್ನು ಕಾಣಬಹುದು. ದುರಂತದಲ್ಲಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ವಯಸ್ಸು ಮತ್ತು ಇತರ ವಿವರಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಳ್ಳಲು ಕಾರಣವೇನು?:ಬಸ್ ಚಲಿಸುತ್ತಿದ್ದಾಗ, ಒಂದು ಟಯರ್ ಸ್ಫೋಟಗೊಂಡು ರಸ್ತೆಯ ತಡೆಗೋಡೆಗೆ ವಾಹನ ಉಜ್ಜಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ರಕ್ಷಣಾ ತಂಡಗಳು ಸದ್ಯಕ್ಕೆ 10 ಶವಗಳನ್ನು ಬಸ್ಸಿನಿಂದ ಹೊರತೆಗೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ:ಲೆಬನಾನ್ನಲ್ಲಿ ಇಸ್ರೇಲ್ನಿಂದ ಸೀಮಿತ ಭೂ ಆಕ್ರಮಣ: ಬೈರುತ್ ಮೇಲೆ ಮತ್ತೆ ಬೃಹತ್ ದಾಳಿ - IDF raids on Hezbollah