ಒಡೆಸಾ (ಉಕ್ರೇನ್): ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿ 26 ತಿಂಗಳೇ ಗತಿಸಿವೆ. ಆದರೂ ಯುದ್ಧ ನಿಲ್ಲುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ. ಮೊತ್ತೊಮ್ಮೆ ರಷ್ಯಾ, ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರಲ್ಲಿ ಕನಿಷ್ಠ 5 ಜನ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಮಾಧ್ಯಮ ವರದಿಗಳ ಪ್ರಕಾರ, ಒಡೆಸಾದ ಬಂದರು ನಗರವಾದ ಬ್ಲಾಕ್ ಸಿ ಪೋರ್ಟ್ ಎಂಬ ಪ್ರದೇಶದಲ್ಲಿ ಕ್ಷಿಪಣಿ ದಾಳಿ ನಡೆದಿದೆ. ಕನಿಷ್ಠ ಐದು ಜನರು ಸಾವನ್ನಪ್ಪಿದ್ದು ಜತೆಗೆ ಹಲವಾರು ವಸತಿ ಕಟ್ಟಡಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಗಳು ಹಾನಿಗೊಳಗಾಗಿವೆ ಎಂದು ತಿಳಿಸಿದೆ.
ಉಕ್ರೇನ್‌ನ ಪ್ರಾಸಿಕ್ಯೂಟರ್ ಜನರಲ್ ದಾಳಿಯ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಸಮುದ್ರ ತೀರದಲ್ಲಿ ಒಂದರ ಹಿಂದೆ ಒಂದರಂತೆ ಹಲವಾರು ಸ್ಫೋಟಗಳು ಹೇಗೆ ನಡೆದವು ಎಂಬುದನ್ನು ಇದರಲ್ಲಿ ಕಾಣಬಹುದಾಗಿದೆ. ವರದಿಗಳ ಪ್ರಕಾರ, ರಷ್ಯಾದ ದಾಳಿಯಲ್ಲಿ ಧ್ವಂಸಗೊಂಡ ಕಟ್ಟಡಗಳ ಪೈಕಿ ಒಂದು ಶಿಕ್ಷಣ ಸಂಸ್ಥೆಯೂ ಸೇರಿದೆ ಎನ್ನಲಾಗಿದೆ.