ಸಿಯೋಲ್ : ಉತ್ತರ ಕೊರಿಯಾ ಮತ್ತು ರಷ್ಯಾ ನಡುವಿನ ಇತ್ತೀಚಿನ ರಕ್ಷಣಾ ಒಪ್ಪಂದವು ಜಗತ್ತನ್ನು ಅಸ್ಥಿರಗೊಳಿಸುವಂತಿದ್ದು, ವಿಶ್ವಕ್ಕೆ ಅಪಾಯಕಾರಿಯಾಗಿದೆ ಎಂದು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಆರೋಪಿಸಿದ್ದಾರೆ. ಮಂಗಳವಾರ ಉತ್ತರ ಮತ್ತು ದಕ್ಷಿಣ ಕೊರಿಯಾ ಗಡಿಗಳ ಮಧ್ಯದ ಉದ್ವಿಗ್ನ ಗಡಿ ಗ್ರಾಮಕ್ಕೆ ಭೇಟಿ ನೀಡಿದ ನಂತರ ಅವರು ಮಾತನಾಡಿದರು. ವಿಶ್ವಶಾಂತಿಗೆ ಪ್ರತಿಕೂಲವಾದ ರೀತಿಯಲ್ಲಿ ರಷ್ಯಾ ವರ್ತಿಸುತ್ತಿದೆ ಎಂದು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಕೊರಿಯಾದ ಗಡಿ ಗ್ರಾಮವಾದ ಪನ್ಮುಂಜೊಮ್ನ ದಕ್ಷಿಣ ಭಾಗಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಕಳೆದ ಜೂನ್ನಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎರಡೂ ದೇಶಗಳ ಮೇಲೆ ದಾಳಿ ನಡೆದರೆ ಪರಸ್ಪರ ಮಿಲಿಟರಿ ಸಹಾಯವನ್ನು ಖಾತರಿಪಡಿಸುವ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದರು. ಮಿಲಿಟರಿ ಮತ್ತು ಆರ್ಥಿಕ ಸಹಾಯಕ್ಕೆ ಪ್ರತಿಯಾಗಿ, ಉಕ್ರೇನ್ ಯುದ್ಧದಲ್ಲಿ ಬಳಸಲು ರಷ್ಯಾಕ್ಕೆ ಹೆಚ್ಚು ಅಗತ್ಯವಾಗಿರುವ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಉತ್ತರ ಕೊರಿಯಾ ಪೂರೈಸುತ್ತಿದೆ ಎಂದು ಯುಎಸ್ ಮತ್ತು ಅದರ ಮಿತ್ರ ರಾಷ್ಟ್ರಗಳು ಆರೋಪಿಸಿವೆ.
ಪ್ರಾದೇಶಿಕ ಭದ್ರತೆಗೆ ಬೆದರಿಕೆಯೊಡ್ಡುವ ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆಗಳನ್ನು ವಾಂಗ್ ಖಂಡಿಸಿದರು. ಡಿಪಿಆರ್ಕೆಯ ಪ್ರಚೋದನಕಾರಿ ಪ್ರತಿಕ್ರಿಯೆಗಳು, ಜಗತ್ತನ್ನು ಅಸ್ಥಿರಗೊಳಿಸುವ ಕ್ರಮಗಳ ಬಗ್ಗೆ ನಾವು ಹೆಚ್ಚಿನ ಕಳವಳ ಹೊಂದಿದ್ದೇವೆ ಎಂದು ಅವರು ಹೇಳಿದರು.