ಟೋಕಿಯೋ (ಜಪಾನ್):ಜಪಾನ್‌ನ ಆಡಳಿತ ಪಕ್ಷ ಭಾನುವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ನಡೆದ ಚುನಾವಣೆಯಲ್ಲಿ ತನ್ನ ಬಹುಮತವನ್ನು ಕಳೆದುಕೊಂಡಿದ್ದು, ನೂತನ ಪ್ರಧಾನಿ ಶಿಗೆರು ಇಶಿಬಾ ಅವರಿಗೆ ಭಾರಿ ಹೊಡೆತ ನೀಡಿದೆ. ಹೀಗಾಗಿ ಸ್ಥಿರ ಸರ್ಕಾರವನ್ನು ನಡೆಸಲು ಒಕ್ಕೂಟದ ಹೊರಗೆ ಹೆಚ್ಚುವರಿ ಬೆಂಬಲವನ್ನು ಹುಡುಕಬೇಕು ಎಂದು ಅಧಿಕೃತ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ಸ್ಲಶ್ ಫಂಡ್ ಹಗರಣವು ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಮತಗಳ ಕೊರತೆಯಾಗಿದೆ. ಈ ನಡುವೆ ಪಕ್ಷದ ಈ ಹಿಂದಿನ ಸರ್ಕಾರದಲ್ಲಿದ್ದ ಕೆಲ ಶಾಸಕರು ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಅವರ ಬೆಂಬಲ ನೀಡಿದರೂ ಜಪಾನ್‌ನ ಕೆಳಮನೆಯಲ್ಲಿ ಸಮ್ಮಿಶ್ರ ಸರ್ಕಾರ ಇನ್ನೂ ಬಹುಮತದ ಕೊರತೆ ಎದುರಿಸುತ್ತಿದೆ.
ಒಟ್ಟಾರೆ 465 ಸದಸ್ಯ ಬಲ ಹೊಂದಿರುವ ಕೆಳಮನೆಯಲ್ಲಿ LDP-Komeito (ಪ್ರಧಾನಿ ಶಿಗೆರು ಇಶಿಬಾ ಪಕ್ಷ) ನೇತೃತ್ವದ ಸಮ್ಮಿಶ್ರ ಸರ್ಕಾರ, ಬಹುಮತಕ್ಕೆ ಬೇಕಾದ 233 ಸ್ಥಾನಗಳ ಮ್ಯಾಜಿಕ್ ನಂಬರ್ ದಾಟಲು ವಿಫಲವಾಗಿದೆ. ಚುನಾವಣೆಗೆ ಮುನ್ನ ಇಶಿಬಾ ನೇತೃತ್ವದ ಸಮ್ಮಿಶ್ರ ಸರ್ಕಾರ ಒಟ್ಟು 288 ಸ್ಥಾನಗಳನ್ನು ಹೊಂದಿತ್ತು. ವರದಿ ಪ್ರಕಾರ ಚುನಾವಣೋತ್ತರ ದೃಷ್ಟಿಕೋನವು ಅನಿಶ್ಚಿತವಾಗಿರುವ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಗಮನಾರ್ಹ ಮತಗಳನ್ನು ಪಡೆದ ಕೆಲವು ಪ್ರಮುಖ ವಿರೋಧ ಪಕ್ಷಗಳು, ಆಡಳಿತಾರೂಢ ಗುಂಪಿನೊಂದಿಗೆ ಸರ್ಕಾರದಲ್ಲಿ ಭಾಗಿಯಾಗುವ ಸಾಧ್ಯತೆಗಳನ್ನು ತಿರಸ್ಕರಿಸಿವೆ.