ಮಾಸ್ಕೋ(ರಷ್ಯಾ):ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಧ್ಯಕ್ಷೀಯ ಚುನಾವಣೆ ಗೆದ್ದಿದ್ದಾರೆ. ಭಾನುವಾರ ಮತದಾನ ಮುಗಿದ ನಂತರದ ಮೊದಲ ಅಧಿಕೃತ ಫಲಿತಾಂಶಗಳ ಪ್ರಕಾರ, ಪುಟಿನ್ ಅವರು ಚುನಾವಣೆಯಲ್ಲಿ ಶೇಕಡಾ 87.17ರಷ್ಟು ಮತ ಗಳಿಸಿದ್ದಾರೆ ಎಂದು ಒಕ್ಕೂಟದ ಕೇಂದ್ರ ಚುನಾವಣಾ ಆಯೋಗದ ದತ್ತಾಂಶ ಉಲ್ಲೇಖಿಸಿ ಟಾಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ರಷ್ಯನ್ ಫೆಡರೇಶನ್ ಅಭ್ಯರ್ಥಿ ನಿಕೊಲಾಯ್ ಖರಿಟೋನೊವ್ ಶೇ.4.1 ಮತಗಳೊಂದಿಗೆ ಎರಡನೇ ಸ್ಥಾನ ಗಳಿಸಿದರೆ, ನ್ಯೂ ಪೀಪಲ್ ಪಾರ್ಟಿ ಅಭ್ಯರ್ಥಿ ವ್ಲಾಡಿಸ್ಲಾವ್ ದಾವಂಕೋವ್ ಶೇ.4.8 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ರಷ್ಯಾ ಅಭ್ಯರ್ಥಿ ಲಿಯೊನಿಡ್ ಸ್ಲಟ್ಸ್ಕಿ ಶೇ.3.15 ಮತಗಳನ್ನು ಪಡೆದಿದ್ದಾರೆ.
5ನೇ ಅವಧಿಗೆ ಪುಟಿನ್‌ಗೆ ಅಧ್ಯಕ್ಷಗಿರಿ: ಈ ಮೂಲಕ ಪುಟಿನ್ ಐದನೇ ಅವಧಿಗೆ ಅಧ್ಯಕ್ಷರಾಗಲಿದ್ದಾರೆ. ಇವರು 1999ರಿಂದಲೂ ಅಧ್ಯಕ್ಷ ಮತ್ತು ಪ್ರಧಾನಿಯಾಗಿ ಅಧಿಕಾರದಲ್ಲಿದ್ದಾರೆ. ಅನಾರೋಗ್ಯದ ಕಾರಣ, ಬೋರಿಸ್ ಯೆಲ್ಟ್ಸಿನ್ 1999ರಲ್ಲಿ ಅಧಿಕಾರವನ್ನು ಪುಟಿನ್‌ಗೆ ಹಸ್ತಾಂತರಿಸಿದ್ದರು. ಅಂದಿನಿಂದ ಯಾವುದೇ ಚುನಾವಣೆಯಲ್ಲಿಯೂ ಸೋತಿಲ್ಲ.
24 ಕ್ಷೇತ್ರಗಳ ಮತ ಎಣಿಕೆಯ ನಂತರ ಈ ಫಲಿತಾಂಶ ದೊರೆತಿದೆ. ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕುವ ಮೂಲಕ ಪುಟಿನ್ ತಮ್ಮ 24 ವರ್ಷಗಳ ಆಡಳಿತವನ್ನು ಇನ್ನೂ ಆರು ವರ್ಷಗಳ ಕಾಲ ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಟೀಕಾಕಾರರ ಮಾತು.
ಪುಟಿನ್ ಅವರ ಕಟ್ಟಾ ರಾಜಕೀಯ ಪ್ರತಿಸ್ಪರ್ಧಿ ಅಲೆಕ್ಸಿ ನವಲ್ನಿ ಕಳೆದ ತಿಂಗಳು ಆರ್ಕ್ಟಿಕ್ ಜೈಲಿನಲ್ಲಿ ನಿಧನರಾಗಿದ್ದರು. ಅವರ ಇತರ ಟೀಕಾಕಾರರು ಜೈಲಿನಲ್ಲಿದ್ದಾರೆ. 71 ವರ್ಷದ ಪುಟಿನ್ ವಿರುದ್ಧ ಮೂವರು ಪ್ರತಿಸ್ಪರ್ಧಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಚುನಾವಣೆ ಮುಕ್ತ/ನ್ಯಾಯಯುತವಾಗಿಲ್ಲ-ಅಮೆರಿಕ: ಈ ನಡುವೆ ಸಾವಿರಾರು ಪುಟಿನ್ ವಿರೋಧಿಗಳು ಮತದಾನ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಧ್ಯಕ್ಷೀಯ ಚುನಾವಣೆ ಮುಕ್ತ ಅಥವಾ ನ್ಯಾಯಯುತವಾಗಿಲ್ಲ ಎಂದು ಅಮೆರಿಕ ದೂರಿದೆ.
ಈ ಗೆಲುವಿನೊಂದಿಗೆ ಪುಟಿನ್ ಅವರು 6 ವರ್ಷಗಳ ಹೊಸ ಅಧಿಕಾರವಧಿಯನ್ನು ಪಡೆದುಕೊಂಡಿದ್ದಾರೆ. ಇದರೊಂದಿಗೆ ರಷ್ಯಾದಲ್ಲಿ ಸುದೀರ್ಘ ಅವಧಿಗೆ ಅಧಿಕಾರದಲ್ಲಿ ಉಳಿಯುವ ವಿಚಾರದಲ್ಲಿ ಜೋಸೆಫ್ ಸ್ಟಾಲಿನ್ ಅವರನ್ನು ಪುಟಿನ್ ಹಿಂದಿಕ್ಕಿದ್ದಾರೆ. ಇದೇ ವೇಳೆ ಹೆಚ್ಚು ಕಾಲ ರಷ್ಯಾದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ರಾಷ್ಟ್ರದ ಮುಖ್ಯಸ್ಥ ಎಂಬ ದಾಖಲೆಯನ್ನೂ ಹೊಂದಿದ್ದಾರೆ.
ದೇಶದ ಚುನಾವಣಾ ಆಯೋಗದ ಅಧಿಕಾರಿಯೊಬ್ಬರ ಪ್ರಕಾರ, ಪ್ರಸ್ತುತ ಅಧ್ಯಕ್ಷೀಯ ಚುನಾವಣೆಯಲ್ಲಿ 80 ಲಕ್ಷಕ್ಕೂ ಹೆಚ್ಚು ಮತದಾರರು ಆನ್‌ಲೈನ್‌ನಲ್ಲಿ ಮತ ಚಲಾಯಿಸಿದ್ದಾರೆ. ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಿದ್ದು ಇದೇ ಮೊದಲು. ಶುಕ್ರವಾರ ಮತ್ತು ಶನಿವಾರ ಹಲವೆಡೆ ಪುಟಿನ್ ವಿರುದ್ಧ ಪ್ರತಿಭಟನೆಗಳು ನಡೆದಿದ್ದು, ಮತಯಂತ್ರಗಳನ್ನು ಹಾಳು ಮಾಡುವ ಪ್ರಯತ್ನಗಳೂ ನಡೆದಿವೆ. ಏತನ್ಮಧ್ಯೆ, ಪ್ರಾಥಮಿಕ ಫಲಿತಾಂಶಗಳಿಂದ ಪುಟಿನ್ ರಷ್ಯಾ ಜನರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಅಮೆರಿಕಕ್ಕೆ ಕಣ್ಗಾವಲು ಜಾಲ ನಿರ್ಮಿಸುತ್ತಿದೆಯೇ ಸ್ಪೇಸ್ ಎಕ್ಸ್?