ಕರ್ನಾಟಕ

karnataka

ETV Bharat / international

ಅಧ್ಯಕ್ಷ ರೈಸಿ ಇದ್ದ ಹೆಲಿಕಾಪ್ಟರ್​ ಪತನ ಘಟನೆ: ವಿಧ್ವಂಸಕ ಕೃತ್ಯವಲ್ಲ ಎಂದ 2ನೇ ವರದಿ - Raisi helicopter crash - RAISI HELICOPTER CRASH

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತದ ಹಿಂದೆ ಯಾವುದೇ ವಿಧ್ವಂಸಕ ಕೃತ್ಯದ ಶಂಕೆ ಕಂಡು ಬಂದಿಲ್ಲ ಎಂದು ಎರಡನೇ ತನಿಖಾ ವರದಿ ಹೇಳಿದೆ.

ಅಧ್ಯಕ್ಷ ರೈಸಿ ಹೆಲಿಕಾಪ್ಟರ್​ ಪತನವಾದ ಸ್ಥಳ
ಅಧ್ಯಕ್ಷ ರೈಸಿ ಹೆಲಿಕಾಪ್ಟರ್​ ಪತನವಾದ ಸ್ಥಳ (IANS image)

By ETV Bharat Karnataka Team

Published : May 30, 2024, 4:18 PM IST

ಟೆಹ್ರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಅವರ ಸಹೋದ್ಯೋಗಿಗಳ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಅಪಘಾತವು ಯಾವುದೇ ವಿಧ್ವಂಸಕ ಕೃತ್ಯದಿಂದ ಸಂಭವಿಸಿರುವ ಸಾಧ್ಯತೆಯನ್ನು ಇರಾನ್ ತಳ್ಳಿಹಾಕಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇರಾನ್​ನ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಬುಧವಾರ ಹೆಲಿಕಾಪ್ಟರ್ ಅಪಘಾತದ ಕಾರಣಗಳ ಬಗ್ಗೆ ಎರಡನೇ ವರದಿಯನ್ನು ಬಿಡುಗಡೆ ಮಾಡಿದ್ದಾರೆ ಎಂದು ಅಧಿಕೃತ ಸುದ್ದಿ ಸಂಸ್ಥೆ ಐಆರ್​ಎನ್ಎ ವರದಿ ಮಾಡಿದೆ.

ಹೆಲಿಕಾಪ್ಟರ್​ನ ಅವಶೇಷಗಳು ಮತ್ತು ಉಳಿದ ಭಾಗಗಳ ಪರೀಕ್ಷೆಗಳ ಫಲಿತಾಂಶಗಳು, ಘಟನೆಯ ಸ್ಥಳದಲ್ಲಿ ಅವಶೇಷಗಳು ಚದುರಿಹೋಗಿರುವ ರೀತಿ ಮತ್ತು ವಿಮಾನದ ಮುಂಭಾಗದಿಂದ ಅವುಗಳು ಬಿದ್ದಿರುವ ದೂರವನ್ನು ಗಮನಿಸಿದರೆ, ಹೆಲಿಕಾಪ್ಟರ್ ಹಾರಾಟದ ಸಮಯದಲ್ಲಿ ಅಥವಾ ಪರ್ವತಕ್ಕೆ ಅಪ್ಪಳಿಸುವ ಕೆಲವೇ ಕ್ಷಣಗಳ ಮೊದಲು ವಿಧ್ವಂಸಕ ಕೃತ್ಯದಿಂದ ಸ್ಫೋಟ ಸಂಭವಿಸಿರಬಹುದು ಎಂಬ ವಾದವನ್ನು ತಳ್ಳಿಹಾಕಲಾಗಿದೆ ಎಂದು ವರದಿ ತಿಳಿಸಿದೆ.

ಅಪಘಾತಕ್ಕೀಡಾದ ಹೆಲಿಕಾಪ್ಟರ್​ ಮೇಲೆ ಯಾವುದೇ ಎಲೆಕ್ಟ್ರಾನಿಕ್ ಸಾಧನದಿಂದ ದಾಳಿ ಮಾಡಲಾಗಿದೆ ಎಂಬ ಬಗ್ಗೆ ಕುರುಹುಗಳು ಪತ್ತೆಯಾಗಿಲ್ಲ. ಆದರೆ ಪೂರ್ವ ಅಜೆರ್ ಬೈಜಾನ್ ಪ್ರಾಂತ್ಯದ ರಾಜಧಾನಿ ತಬ್ರಿಜ್​ಗೆ ಹಿಂದಿರುಗುವ ಸಮಯದಲ್ಲಿ ಹವಾಮಾನ ಪರಿಸ್ಥಿತಿಗಳು ಹೇಗಿದ್ದವು ಎಂಬ ಬಗ್ಗೆ ಮತ್ತಷ್ಟು ತನಿಖೆ ನಡೆಯಬೇಕಿದೆ ಎಂದು ಅದು ಹೇಳಿದೆ.

ವರದಿಯ ಪ್ರಕಾರ, ಹೆಲಿಕಾಪ್ಟರ್​ನಲ್ಲಿದ್ದ ಪ್ರಯಾಣಿಕರು ಮತ್ತು ಸಲಕರಣೆಗಳ ಒಟ್ಟು ತೂಕವು ಟೇಕ್ ಆಫ್ ಸಮಯದಲ್ಲಿ ಮತ್ತು ಹಾರಾಟದ ಸಮಯದಲ್ಲಿ ಗರಿಷ್ಠ ಲೋಡ್ ಮಿತಿಯ ಒಳಗಡೆಯೇ ಇತ್ತು.

ಇದಲ್ಲದೇ ಹಾರಾಟದ ಸಮಯದಲ್ಲಿ ಮತ್ತು ಘಟನೆ ಸಂಭವಿಸುವ 69 ಸೆಕೆಂಡುಗಳ ಮೊದಲು, ಅಪಘಾತಕ್ಕೀಡಾದ ಹೆಲಿಕಾಪ್ಟರ್​ನ ಸಿಬ್ಬಂದಿಯೊಂದಿಗೆ ನಿರ್ದಿಷ್ಟ ಸಮಯಾವಧಿಗಳಲ್ಲಿ ಸಂಪರ್ಕ ನಡೆಯುತ್ತಲೇ ಇತ್ತು. ಹೀಗಾಗಿ ಸಂವಹನ ವ್ಯವಸ್ಥೆಯಲ್ಲಿ ಯಾವುದೇ ಅಡಚಣೆ ಉಂಟಾಗಿರುವುದು ಅಥವಾ ಅದರಲ್ಲಿ ಯಾವುದೇ ಹಸ್ತಕ್ಷೇಪ ನಡೆದಿರುವ ಸಾಧ್ಯತೆ ಇಲ್ಲ ಎಂಬುದು ಕಂಡು ಬರುತ್ತದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಮೇ 23 ರಂದು ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಮೊದಲ ವರದಿಯನ್ನು ಬಿಡುಗಡೆ ಮಾಡಿತ್ತು.

ಮೇ 19 ರ ಭಾನುವಾರದಂದು ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹುಸೇನ್ ಅಮಿರಾಬ್ಡೊಲ್ಲಾಹಿಯಾನ್ ಮತ್ತು ಇತರ ಆರು ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತ ಯುಎಸ್ ನಿರ್ಮಿತ ಬೆಲ್ 212 ಹೆಲಿಕಾಪ್ಟರ್ ಅಜೆರ್ ಬೈಜಾನ್ ಗಡಿಯ ಬಳಿಯ ಪರ್ವತಗಳಲ್ಲಿ ಅಪಘಾತಕ್ಕೀಡಾಗಿತ್ತು. ಹೆಲಿಕಾಪ್ಟರ್​ನ ಸುಟ್ಟ ಅವಶೇಷಗಳು ಮೇ 20 ರ ಸೋಮವಾರ ಮುಂಜಾನೆ ದುರ್ಗಮ ಬೆಟ್ಟಗುಡ್ಡಗಳಲ್ಲಿ ಪತ್ತೆಯಾಗಿದ್ದವು.

ಇದನ್ನೂ ಓದಿ : ಜೆಡ್ಡಾ ಶಾಂತಿ ಮಾತುಕತೆಯಲ್ಲಿ ಭಾಗವಹಿಸಲ್ಲ ಎಂದ ಸುಡಾನ್: ಅಮೆರಿಕದ ಆಹ್ವಾನ ತಿರಸ್ಕಾರ - Sudan Peace Talks

ABOUT THE AUTHOR

...view details