ನವದೆಹಲಿ/ ಲಂಡನ್: ವಿಶ್ವದಾದ್ಯಂತ ರಾಮ ಭಕ್ತರು ಕಾಯುತ್ತಿರುವ ರಾಮ ಮಂದಿರದ ಪ್ರತಿಷ್ಠಾಪನೆಯ ಭವ್ಯ ದೃಶ್ಯ ಹತ್ತಿರವಾಗುತ್ತಿದ್ದಂತೆ ವಿಶ್ವದ ಹಲವಾರು ರಾಷ್ಟ್ರಗಳಲ್ಲಿನ ಜನತೆ ಈ ಭವ್ಯ ಸಂದರ್ಭವನ್ನು ಉತ್ಸಾಹದಿಂದ ಆಚರಿಸಿದರು. ಅಯೋಧ್ಯೆಯಲ್ಲಿ ಮೆಗಾ ಕಾರ್ಯಕ್ರಮಕ್ಕೆ ದೇವಾಲಯಗಳು ಸಜ್ಜಾಗುತ್ತಿದ್ದಂತೆ ಇಂಗ್ಲೆಂಡ್ನಲ್ಲೂ ಕೂಡ ರೋಮಾಂಚಕ ಆಚರಣೆಗಳಿಗೆ ಸಾಕ್ಷಿಯಾಗಿದೆ. ಬ್ರಿಟನ್ನಲ್ಲಿ ಸುಮಾರು 250 ಹಿಂದೂ ದೇವಾಲಯಗಳಿವೆ.
ಯುಕೆಯಲ್ಲಿರುವ ಭಾರತೀಯ ವಲಸಿಗರು ಲಂಡನ್ನಲ್ಲಿ ಕಾರ್ ರ‍್ಯಾಲಿಯನ್ನು ಸಹ ಆಯೋಜಿಸಿದ್ದರು. ರ‍್ಯಾಲಿಯಲ್ಲಿ ಭಾಗವಹಿಸಿದ್ದವರು 'ಜೈ ಶ್ರೀ ರಾಮ್' ಘೋಷಣೆಗಳನ್ನು ಕೂಗಿದರು ಮತ್ತು ಭಗವಾನ್ ರಾಮನನ್ನು ಸ್ತುತಿಸುವ ಹಾಡು ಹಾಡಿದರು. ಆಸ್ಟ್ರೇಲಿಯಾದಲ್ಲಿ ಕೂಡ ರಾಮ ಮಂದಿರ ಕಾರ್ಯಕ್ರಮದ ಬಗ್ಗೆ ಅತೀವ ಉತ್ಸಾಹ ಕಂಡು ಬಂದಿತು. ನೂರಾರು ದೇವಾಲಯಗಳಲ್ಲಿ ಸರಣಿ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.
ಭಾರತದಿಂದ ತರಲಾದ ಸುಂದರವಾಗಿ ಕೆತ್ತಲಾದ ವಿಗ್ರಹಗಳಿಗೆ ಮೆಕ್ಸಿಕೊದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭ ಏರ್ಪಡಿಸಲಾಗಿತ್ತು. ಅಮೆರಿಕದ ಅರ್ಚಕರೊಬ್ಬರು ಪ್ರಾಣ ಪ್ರತಿಷ್ಠೆ ನೆರವೇರಿಸಿದರು. ಭಾರತೀಯ ವಲಸಿಗರು ಹಾಡಿದ ಸ್ತುತಿಗೀತೆಗಳು ಮತ್ತು ಹಾಡುಗಳು ಸಭಾಂಗಣದಾದ್ಯಂತ ಪ್ರತಿಧ್ವನಿಸುತ್ತಿದ್ದಂತೆ ವಾತಾವರಣವು 'ದೈವಿಕ ಶಕ್ತಿ'ಯಿಂದ ತುಂಬಿತ್ತು.
ಮೆಕ್ಸಿಕೋದಲ್ಲಿನ ಭಾರತೀಯ ಮಿಷನ್ ಕೂಡ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, "ಮೆಕ್ಸಿಕೋದಲ್ಲಿ ಮೊದಲ ಭಗವಾನ್ ರಾಮ ಮಂದಿರ ನಿರ್ಮಾಣವಾಗಿದೆ. ಅದೂ ಕೂಡ ಅಯೋಧ್ಯೆಯಲ್ಲಿ ನಡೆಯುವ 'ಪ್ರಾಣ ಪ್ರತಿಷ್ಠಾ' ಸಮಾರಂಭದ ಮುನ್ನಾದಿನದಂದು ಮೆಕ್ಸಿಕೊದ ಕ್ವೆರೆಟಾರೊ ನಗರದಲ್ಲಿ ಮೊದಲ ಭಗವಾನ್ ರಾಮ ದೇವಾಲಯ ನಿರ್ಮಾಣವಾಗಿದೆ." ಎಂದು ಬರೆದಿದೆ.
ಅದೇ ರೀತಿ ಡೆನ್ಮಾರ್ಕ್, ನ್ಯೂಜಿಲ್ಯಾಂಡ್ , ತೈವಾನ್ ಮತ್ತು ಸೀಶೆಲ್ಸ್ನಂಥ ದೇಶಗಳಲ್ಲಿನ ಭಾರತೀಯ ವಲಸಿಗರು ಸಹ ರಾಮ ಮಂದಿರ ಉದ್ಘಾಟನೆಯನ್ನು ಆಚರಿಸಿದರು. ಮಾರಿಷಸ್ನಲ್ಲಿ ಕೂಡ ಸಂಭ್ರಮ ಮನೆ ಮಾಡಿತ್ತು. ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಮಾತನಾಡಿ, "ಶ್ರೀರಾಮ ಅಯೋಧ್ಯೆಗೆ ಮರಳಿದ ಈ ಸಂದರ್ಭವನ್ನು ನಾವೆಲ್ಲ ಆಚರಿಸೋಣ. ಶ್ರೀರಾಮನ ಆಶೀರ್ವಾದ ಮತ್ತು ಬೋಧನೆಗಳು ಶಾಂತಿ ಮತ್ತು ಸಮೃದ್ಧಿಯತ್ತ ನಮ್ಮ ದಾರಿಯನ್ನು ಬೆಳಗಿಸಲಿ. ಜೈ ಹಿಂದ್! ಜೈ ಮಾರಿಷಸ್" ಎಂದು ಹೇಳಿದರು.
ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಭಗವಾನ್ ರಾಮನ ವಿಗ್ರಹವನ್ನು ಸ್ಥಾಪಿಸುವುದು ಮಾರಿಷಸ್ ಜನರಿಗೆ ಹೆಚ್ಚಿನ ಆಧ್ಯಾತ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ ಎಂದು ಭಾರತದಲ್ಲಿ ಮಾರಿಷಸ್ ಹೈಕಮಿಷನರ್ ಹೇಮಂಡೋಯಲ್ ಡಿಲ್ಲಮ್ ಹೇಳಿದ್ದಾರೆ. ಭಗವಾನ್ ರಾಮನು ವನವಾಸದ ನಂತರ ಹಿಂತಿರುಗುತ್ತಿರುವಂತೆ ತೋರುತ್ತದೆ ಎಂದು ಅವರು ಬಣ್ಣಿಸಿದ್ದಾರೆ.
ಇದನ್ನೂ ಓದಿ : ಇಂಗ್ಲೆಂಡ್ ಸಂಸತ್ತಿನಲ್ಲಿಯೂ ಶ್ರೀರಾಮನ ಜಪ