ಮಾಸ್ಕೋ(ರಷ್ಯಾ): ರಷ್ಯಾ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಪ್ರತಿಷ್ಠಿತ ನಾಗರಿಕ ಗೌರವಕ್ಕೆ ಭಾಜನರಾಗಿದ್ದಾರೆ. ಭಾರತ ಹಾಗು ರಷ್ಯಾ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಉತ್ತೇಜಿಸುವಲ್ಲಿ ಅಸಾಧಾರಣ ಸೇವೆಗಳಿಗಾಗಿ ಮೋದಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ 'ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ಟಲ್' ಪ್ರಶಸ್ತಿ ನೀಡಿ ಗೌರವಿಸಿದರು.
''ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ಟಲ್ ಗೌರವವನ್ನು ಭಾರತದ 140 ಕೋಟಿ ಜನರಿಗೆ ಅರ್ಪಿಸುತ್ತೇನೆ'' ಎಂದು ಮೋದಿ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎರಡು ದಿನಗಳ ರಷ್ಯಾ ಪ್ರವಾಸದಲ್ಲಿದ್ದ ಮೋದಿ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.
ಯೇಸುವಿನ ಮೊದಲ ಧರ್ಮಪ್ರಚಾರಕ ಮತ್ತು ರಷ್ಯಾದ ಪೋಷಕ ಸಂತರಾದ ಸೇಂಟ್ ಆಂಡ್ರ್ಯೂ ಅವರ ಗೌರವಾರ್ಥವಾಗಿ 1698ರಲ್ಲಿ ತ್ಸಾರ್ ಪೀಟರ್ ದಿ ಗ್ರೇಟ್ ಈ 'ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ತಲ್' ಪ್ರಶಸ್ತಿ ಸ್ಥಾಪಿಸಿದ್ದರು. ಇದು ರಷ್ಯಾದ ಅತ್ಯುನ್ನತ ನಾಗರಿಕ ಗೌರವವಾಗಿದೆ.
ರಷ್ಯಾದ ಸಮೃದ್ಧಿ, ಶ್ರೇಷ್ಠತೆ ಮತ್ತು ವೈಭವಕ್ಕೆ ಕೊಡುಗೆ ನೀಡುವ ಪ್ರಮುಖ ಸರ್ಕಾರಿ ಮತ್ತು ಸಾರ್ವಜನಿಕ ಗಣ್ಯರು, ಸೇನಾ, ವಿಜ್ಞಾನ, ಸಂಸ್ಕೃತಿ, ಕಲೆ ಮತ್ತು ಆರ್ಥಿಕತೆಯ ವಿವಿಧ ಕ್ಷೇತ್ರಗಳ ಅತ್ಯುತ್ತಮ ಸಾಧಕರಿಗೆ ಅವರ ಅಸಾಧಾರಣ ಸೇವೆಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅಲ್ಲದೇ, ಪ್ರಶಸ್ತಿಯು ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವವನ್ನೂ ಖಾತ್ರಿಪಡಿಸುತ್ತಿದೆ.
ರಷ್ಯಾ ಜೊತೆಗಿನ ಸಂಬಂಧವನ್ನು ಅಭಿವೃದ್ಧಿಪಡಿಸುವಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ವಿದೇಶಿ ರಾಷ್ಟ್ರಗಳ ಸರ್ಕಾರಗಳ ಮುಖ್ಯಸ್ಥರು ಮತ್ತು ನಾಯಕರಿಗೂ ಈ ಗೌರವ ಸಲ್ಲಿಸಲಾಗುತ್ತದೆ. 1918ರಲ್ಲಿ ಇದನ್ನು ರದ್ದುಗೊಳಿಸಲಾಗಿತ್ತು. 1998ರಲ್ಲಿ ರಷ್ಯಾಧ್ಯಕ್ಷರ ಆದೇಶದ ಮೇರೆಗೆ ಮರು ಸ್ಥಾಪಿಸಲಾಗಿದೆ.
ಇದನ್ನೂ ಓದಿ:ರಷ್ಯಾ - ಭಾರತದ ಸಂಬಂಧ ವೃದ್ಧಿಯಲ್ಲಿ ಬಾಲಿವುಡ್ ಸಿನಿಮಾಗಳ ಪಾತ್ರವೂ ಇದೆ: ಪ್ರಧಾನಿ ಮೋದಿ