ರಿಯೋ ಡಿ ಜನೈರೊ(ಬ್ರೆಜಿಲ್): ಮೂರು ದೇಶಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, 19ನೇ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಇಂದು ರಿಯೋ ಡಿ ಜನೈರೊ ನಗರಕ್ಕೆ ಬಂದಿಳಿದರು. ಇಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಜಾಗತಿಕ ನಾಯಕರು ಭಾಗವಹಿಸಲಿದ್ದಾರೆ.
ನೈಜೀರಿಯಾದ ಮೊದಲ ಭೇಟಿಯ ಬಳಿಕ ಮೋದಿ ಬ್ರೇಜಿಲ್ಗೆ ಆಗಮಿಸಿದ್ದಾರೆ. ಈ ಕುರಿತು ತಮ್ಮ 'ಎಕ್ಸ್' ಖಾತೆಯಲ್ಲಿ ಅವರು ಪೋಸ್ಟ್ ಮಾಡಿದ್ದು, "ಜಿ20 ಶೃಂಗಸಭೆಗಾಗಿ ಬ್ರೇಜಿಲ್ನ ರಿಯೋ ಡಿ ಜನೈರೊ ನಗರಕ್ಕೆ ಬಂದಿಳಿದಿದ್ದೇನೆ. ಜಾಗತಿಕ ನಾಯಕರ ಜೊತೆಗಿನ ಫಲಪ್ರದ ಮಾತುಕತೆ ಮತ್ತು ಚರ್ಚೆಗಾಗಿ ಎದುರು ನೋಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
"ಜಿ20 ಶೃಂಗಸಭೆಯ ಭಾಗವಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಅದ್ಭುತ ನಗರ ರಿಯೊ ಡಿ ಜನೈರೊಗೆ ಬಂದಿದ್ದಾರೆ" ಎಂದು ಬ್ರೇಜಿಲ್ನಲ್ಲಿ ಸ್ವಾಗತ ಕೋರುವ ಫೋಟೋವನ್ನು 'ಎಕ್ಸ್'ನಲ್ಲಿ ಪೋಸ್ಟ್ ಮಾಡುವ ಮೂಲಕ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮಾಹಿತಿ ನೀಡಿದೆ.
"ಬ್ರೆಜಿಲ್ ಈ ಬಾರಿ ಭಾರತದ ಪರಂಪರೆಯನ್ನು ಸೃಷ್ಟಿಸಿದೆ. 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ನಮ್ಮ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜಿ20 ಶೃಂಗಸಭೆಯಲ್ಲಿ ಅರ್ಥಪೂರ್ಣ ಚರ್ಚೆಗಳನ್ನು ಮಾಡಲು ಕಾಯುತ್ತಿದ್ದೇನೆ. ಜಾಗತಿಕ ನಾಯಕರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸುವ ಅವಕಾಶವನ್ನು ಕೂಡ ಇದೇ ವೇಳೆ ಬಳಸಿಕೊಳ್ಳುತ್ತೇನೆ" ಎಂದು ವಿದೇಶ ಪ್ರವಾಸಕ್ಕೂ ಮುನ್ನ ಮೋದಿ ಪೋಸ್ಟ್ ಮಾಡಿದ್ದರು.