ವಿಯೆನ್ನಾ(ಆಸ್ಟ್ರಿಯಾ):ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆಸ್ಟ್ರಿಯಾದ ವಿಯೆನ್ನಾಗೆ ಆಗಮಿಸಿದರು. ರಷ್ಯಾ ರಾಜಧಾನಿ ಮಾಸ್ಕೋದಿಂದ ನೇರವಾಗಿ ಇಲ್ಲಿಗೆ ಬಂದಿಳಿದರು.
ಎರಡು ದಿನಗಳ ಪ್ರವಾಸಕ್ಕಾಗಿ ಬಂದಿರುವ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಆಸ್ಟ್ರಿಯಾ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶಾಲೆನ್‌ಬರ್ಗ್ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ, ಸೇನಾ ಗೌರವಗಳನ್ನು ಸಲ್ಲಿಸಿ ಅದ್ಧೂರಿ ಸ್ವಾಗತ ಕೋರಲಾಯಿತು. ಇಂದು ಆಸ್ಟ್ರಿಯಾ ಗಣರಾಜ್ಯದ ಅಧ್ಯಕ್ಷ ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ಅವರನ್ನು ಪ್ರಧಾನಿ ಭೇಟಿ ಮಾಡಲಿದ್ದಾರೆ. ಜೊತೆಗೆ ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರೊಂದಿಗೆ ಮಾತುಕತೆ ನಡೆಸುವರು. ಈ ವೇಳೆ, ಪ್ರಧಾನಿ ಮತ್ತು ಚಾನ್ಸೆಲರ್ ಭಾರತ ಮತ್ತು ಆಸ್ಟ್ರಿಯಾದ ಉದ್ಯಮಿಗಳನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.
ಆಸ್ಟ್ರಿಯಾಕ್ಕೆ ಮೋದಿ ಭೇಟಿ ಕುರಿತು ಚಾನ್ಸೆಲರ್ ನೆಹಮ್ಮರ್ ಪ್ರತಿಕ್ರಿಯಿಸಿ, ''ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂದಿನ ವಾರ ವಿಯೆನ್ನಾದಲ್ಲಿ ಸ್ವಾಗತಿಸಲು ನಾನು ತುಂಬಾ ಎದುರು ನೋಡುತ್ತಿದ್ದೇನೆ. ಈ ಭೇಟಿಯು ವಿಶೇಷ ಗೌರವವಾಗಿದೆ. ಏಕೆಂದರೆ ಇದು 40 ವರ್ಷಗಳ ನಂತರ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿದೆ ಮತ್ತು ನಾವು ಭಾರತದೊಂದಿಗೆ 75 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಆಚರಿಸುತ್ತಿರುವ ಮಹತ್ವದ ಮೈಲಿಗಲ್ಲು'' ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.