ಕರ್ನಾಟಕ

karnataka

ETV Bharat / international

ರಾಜಕೀಯ ಗಲಭೆ, ಭಯೋತ್ಪಾದನೆ ತಡೆಗೆ ಪಾಕಿಸ್ತಾನ ಹೆಣಗಾಟ: ಎಸ್​ಸಿಒ ಶೃಂಗಸಭೆ ನಡೆಸಲೂ ಒದ್ದಾಟ!

ಪಾಕಿಸ್ತಾನದಲ್ಲಿ ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಒಂದು ವಿಶ್ಲೇಷಣೆ ಇಲ್ಲಿದೆ.

ರಾಜಕೀಯ ಗಲಭೆ, ಭಯೋತ್ಪಾದನೆ ತಡೆಗೆ ಪಾಕಿಸ್ತಾನ ಹೆಣಗಾಟ
ರಾಜಕೀಯ ಗಲಭೆ, ಭಯೋತ್ಪಾದನೆ ತಡೆಗೆ ಪಾಕಿಸ್ತಾನ ಹೆಣಗಾಟ (IANS)

By ETV Bharat Karnataka Team

Published : Oct 14, 2024, 7:42 PM IST

ಪಾಕಿಸ್ತಾನದ ಕರಾಚಿಯ ಬಿಗಿ ಭದ್ರತೆಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೀನಾದ ಎಂಜಿನಿಯರ್​ಗಳನ್ನು ಕರೆದುಕೊಂಡು ಹೋಗುತ್ತಿದ್ದ ಬೆಂಗಾವಲು ವಾಹನದ ಮೇಲೆ ಇತ್ತೀಚೆಗೆ ನಡೆದ ಆತ್ಮಾಹುತಿ ದಾಳಿಯಲ್ಲಿ ಇಬ್ಬರು ಚೀನೀಯರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾಕಿಸ್ತಾನದಲ್ಲಿ ನಿರಂತರವಾಗಿ ನಡೆಯುತ್ತಿರುವ ಭಯೋತ್ಪಾದಕ ಘಟನೆಗಳ ಸರಣಿಯಲ್ಲಿ ಇದು ಮತ್ತೊಂದು ಘಟನೆಯಾಗಿದೆ. ಅಕ್ಟೋಬರ್ 15-16ರಂದು ಇಸ್ಲಾಮಾಬಾದ್​ನಲ್ಲಿ ಎಸ್​ಸಿಒ (ಶಾಂಘೈ ಸಹಕಾರ ಸಂಸ್ಥೆ) ಸಂಘಟನೆಯ ದೇಶಗಳ ಮುಖ್ಯಸ್ಥರ ಮಂಡಳಿಯ ಸಭೆಯನ್ನು ಆಯೋಜಿಸಲು ಪಾಕಿಸ್ತಾನ ಸಿದ್ಧತೆ ನಡೆಸುತ್ತಿರುವಾಗಲೇ ಈ ಭಯೋತ್ಪಾದಕ ದಾಳಿ ನಡೆದಿದೆ.

ಕರಾಚಿ ವಿಮಾನ ನಿಲ್ದಾಣದಲ್ಲಿ ನಡೆದ ಭಯೋತ್ಪಾದಕ ದಾಳಿಯು ಈಗಾಗಲೇ ಭಯೋತ್ಪಾದನೆಯಿಂದ ತತ್ತರಿಸಿರುವ ಪಾಕಿಸ್ತಾನಕ್ಕೆ ಆತಂಕ ಹೆಚ್ಚಾಗುವಂತೆ ಮಾಡಿದೆ. ಅತ್ಯಂತ ಬಿಗಿ ಭದ್ರತೆಯನ್ನು ಹೊಂದಿರುವ ವಿಮಾನ ನಿಲ್ದಾಣದ ಹತ್ತಿರದಲ್ಲಿಯೇ ಪಾಕಿಸ್ತಾನದ ಮಿಲಿಟರಿ ನೆಲೆಗಳಿವೆ. ಆದರೂ ಭಯೋತ್ಪಾದಕರು ಈ ಪ್ರದೇಶಕ್ಕೆ ನುಗ್ಗಿ ದಾಳಿ ನಡೆಸಿರುವುದು ಪಾಕಿಸ್ತಾನಕ್ಕೆ ತೀವ್ರ ಮುಜುಗರವನ್ನುಂಟುಮಾಡಿದೆ. ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಈ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಅದರ ಮಜೀದ್ ಬ್ರಿಗೇಡ್ ದಾಳಿ ನಡೆಸಿದೆ ಎಂದು ಅದು ಉಲ್ಲೇಖಿಸಿದೆ.

ಈ ಘಟನೆಯು ಟ್ಯಾಂಕರ್ ಸ್ಫೋಟ ಎಂದು ಪಾಕಿಸ್ತಾನ ಆರಂಭದಲ್ಲಿ ಹೇಳಿತ್ತು. ಆದರೆ ಇದನ್ನು ಅಲ್ಲಗಳೆದ ಚೀನಾದ ರಾಯಭಾರ ಕಚೇರಿ, ಇದೊಂದು ಆತ್ಮಾಹುತಿ ದಾಳಿ ಎಂಬುದನ್ನು ಖಚಿತಪಡಿಸಿತು. ದಾಳಿಗೊಳಗಾದ ವಾಹನದಲ್ಲಿ ಪೋರ್ಟ್ ಖಾಸಿಮ್ ಎಲೆಕ್ಟ್ರಿಕ್ ಪವರ್ ಕಂಪನಿ (ಪ್ರೈವೇಟ್) ಲಿಮಿಟೆಡ್‌ನ ಚೀನೀ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ಇಸ್ಲಾಮಾಬಾದ್​ನಲ್ಲಿರುವ ಚೀನಾದ ರಾಯಭಾರ ಕಚೇರಿ ಹೇಳಿದೆ. ಇದೇ ಕಂಪನಿಯೊಂದಿಗೆ ಪಾಕಿಸ್ತಾನದ ಹಣಕಾಸು ಸಚಿವಾಲಯವು ಸಾಲದ ಮರುಹಂಚಿಕೆ ಮಾತುಕತೆಯಲ್ಲಿ ತೊಡಗಿರುವುದು ಗಮನಾರ್ಹ.

ಘಟನೆಯ ಬಗ್ಗೆ ಇಸ್ಲಾಮಾಬಾದ್​ನಲ್ಲಿರುವ ಚೀನಾದ ರಾಯಭಾರ ಕಚೇರಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ಪಾಕಿಸ್ತಾನವು 'ದಾಳಿಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು, ದುಷ್ಕರ್ಮಿಗಳನ್ನು ಕಠಿಣವಾಗಿ ಶಿಕ್ಷಿಸಬೇಕು ಮತ್ತು ಪಾಕಿಸ್ತಾನದಲ್ಲಿನ ಚೀನೀ ನಾಗರಿಕರು, ಸಂಸ್ಥೆಗಳು ಮತ್ತು ಯೋಜನೆಗಳ ಸುರಕ್ಷತೆಯ ರಕ್ಷಣೆಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು' ಎಂದು ಒತ್ತಾಯಿಸಿದೆ. ಈ ಘಟನೆಯಿಂದ ಪಾಕಿಸ್ತಾನ ಸರ್ಕಾರ ಎಷ್ಟು ಗಾಬರಿಯಾಗಿದೆ ಎಂದರೆ, ಪ್ರಧಾನಿ ಶೆಹಬಾಜ್ ಷರೀಫ್ ಅವರು ಸ್ವತಃ ಚೀನಾದ ರಾಯಭಾರ ಕಚೇರಿಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ವೈಯಕ್ತಿಕವಾಗಿ ತನಿಖೆಯ ಮೇಲ್ವಿಚಾರಣೆ ಮಾಡುವುದಾಗಿ ಅವರು ರಾಯಭಾರಿಗೆ ಭರವಸೆ ನೀಡಿದ್ದಾರೆ.

ಚೀನಾದ ದಿನಪತ್ರಿಕೆ ತನ್ನ ಸಂಪಾದಕೀಯದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು, 'ಚೀನಾ ಮತ್ತು ಪಾಕಿಸ್ತಾನ ಭಯೋತ್ಪಾದನೆ ನಿಗ್ರಹ ಮತ್ತು ಭದ್ರತಾ ಸಹಕಾರವನ್ನು ಮತ್ತಷ್ಟು ಬಲಪಡಿಸಬೇಕು.' ಎಂದು ಹೇಳಿದೆ.

ಪಾಕಿಸ್ತಾನದ ಸಿಪಿಇಸಿ ಯೋಜನೆಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದಾಗ ಚೀನಾ ವಿರೋಧಿ ಶಕ್ತಿಗಳು ಒಂದು ರೀತಿಯ ಖುಷಿಯ ಭಾವನೆಯನ್ನು ಅನುಭವಿಸುತ್ತಾರೆ ಎಂದಿರುವ ಚೀನಾ ತನ್ನ ನಾಗರಿಕರನ್ನು ರಕ್ಷಿಸಲು ಪಾಕಿಸ್ತಾನದೊಳಗೆ ತನ್ನದೇ ಪಡೆಗಳನ್ನು ನಿಯೋಜಿಸಬೇಕು ಎಂದು ಮತ್ತೊಮ್ಮೆ ಸುಳಿವು ನೀಡಿದೆ. ಆದರೆ ಚೀನಾ ಸೈನ್ಯದ ಇಂಥ ಯಾವುದೇ ನಿಯೋಜನೆಯು ಪಾಕಿಸ್ತಾನಕ್ಕೆ ಅತ್ಯಂತ ಅವಮಾನಕರವಾಗಿರುತ್ತದೆ.

ಪಾಕಿಸ್ತಾನದ ಪಶ್ಚಿಮ ಪ್ರಾಂತ್ಯಗಳಲ್ಲಿ ಭಯೋತ್ಪಾದಕ ಘಟನೆಗಳು ಮುಂದುವರೆದಿವೆ. ಭದ್ರತಾ ಪಡೆಗಳ ಸಿಬ್ಬಂದಿ, ಭಯೋತ್ಪಾದಕರು ಮತ್ತು ಅಮಾಯಕರ ಸಾವಿಗೀಡಾಗುತ್ತಿರುವ ಬಗ್ಗೆ ಪ್ರತಿದಿನ ವರದಿಗಳು ಬರುತ್ತಿವೆ. ಈ ಪ್ರದೇಶಗಳಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚಾಗಿದೆ.

ಅದೇ ಸಮಯದಲ್ಲಿ, ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷವು ತನ್ನ ಪ್ರತಿಭಟನೆಯನ್ನು ಮುಂದುವರಿಸದಂತೆ ತಡೆಯಲು, ಎಸ್​ಸಿಒ ಶೃಂಗಸಭೆಗಾಗಿ ಇಸ್ಲಾಮಾಬಾದ್​ನಲ್ಲಿ ಭದ್ರತೆಯ ಜವಾಬ್ದಾರಿಯನ್ನು ಪಾಕಿಸ್ತಾನ ಸೇನೆಗೆ ನೀಡಲಾಗಿದೆ. ಯಾವುದೇ ಬಹಿರಂಗ ಸಭೆಗಳನ್ನು ತಡೆಗಟ್ಟಲು ಪಾಕಿಸ್ತಾನ ಈಗಾಗಲೇ ಇಸ್ಲಾಮಾಬಾದ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆಕ್ಷನ್ 144 ವಿಧಿಸಿದೆ. ಹೆಚ್ಚಿದ ಭಯೋತ್ಪಾದನೆ ಮತ್ತು ಪಿಟಿಐ ಪ್ರತಿಭಟನೆಗಳು ಬಹುತೇಕ ಹಿಂಸಾತ್ಮಕವಾಗಿದ್ದು, ಎಸ್​ಸಿಒ ಸಮುದಾಯದ ಮುಂದೆ ದೇಶದ ಸರ್ಕಾರವನ್ನು ಮುಜುಗರಕ್ಕೀಡು ಮಾಡುವ ಗುರಿಯನ್ನು ಹೊಂದಿವೆ ಎಂದು ಪಾಕಿಸ್ತಾನ ನಾಯಕತ್ವವು ಸರಿಯಾಗಿಯೇ ಗ್ರಹಿಸಿದೆ.

ಎಸ್​ಸಿಒ ಶೃಂಗಸಭೆಯ ಸಂದರ್ಭದಲ್ಲಿ ಅಕ್ಟೋಬರ್ 15ರಂದು ಇಸ್ಲಾಮಾಬಾದ್​ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಪಿಟಿಐ ಈಗಾಗಲೇ ಘೋಷಿಸಿದೆ. ಪಿಟಿಐ ಪಕ್ಷದ ಖೈಬರ್ ಪಖ್ತುನಖ್ವಾ ಸಿಎಂ ಸಲಹೆಗಾರ ಮೊಹಮ್ಮದ್ ಅಲಿ ಸೈಫ್ ಅವರು ತಮ್ಮ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಭಾರತದ ವಿದೇಶಾಂಗ ಸಚಿವರಿಗೆ ಆಹ್ವಾನ ನೀಡಿದ್ದರು. ಆದರೆ ಪಕ್ಷ ನಂತರ ಈ ಹೇಳಿಕೆಯನ್ನು ತಳ್ಳಿ ಹಾಕಿತು.

ಎಸ್​ಸಿಒ ಶೃಂಗಸಭೆಯ ಹೊರತಾಗಿ ಚೀನಾವನ್ನು ಪ್ರತಿನಿಧಿಸುವ ಚೀನಾದ ಪ್ರಧಾನಿ ಲಿ ಕಿಯಾಂಗ್ ಅವರೊಂದಿಗೆ ಮಾತುಕತೆ ನಡೆಸಲು ಬದ್ಧರಾಗಿರುವ ಶೆಹಬಾಜ್ ಷರೀಫ್ ಅವರು ತಮ್ಮ ದೇಶದ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ. ರಷ್ಯಾ ಮತ್ತು ಪಶ್ಚಿಮ ಏಷ್ಯಾ ಸೇರಿದಂತೆ ಇತರ ದೇಶಗಳು ಪಾಕಿಸ್ತಾನದಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿರುವುದು ಗಮನಾರ್ಹ.

ಇದಲ್ಲದೆ, ಸಿಪಿಇಸಿ ಯೋಜನೆಗಳಲ್ಲಿ ಕೆಲಸ ಮಾಡುವ ಚೀನಾದ ಎಂಜಿನಿಯರ್​ಗಳ ಇದೇ ಮೊದಲ ಬಾರಿ ದಾಳಿ ನಡೆದಿದ್ದಲ್ಲ. ಈ ವರ್ಷದ ಮಾರ್ಚ್​ನಲ್ಲಿ ಚೀನೀ ಧನಸಹಾಯದಿಂದ ನಿರ್ಮಾಣವಾಗುತ್ತಿರುವ ದಾಸು ಜಲವಿದ್ಯುತ್ ಯೋಜನೆಯ ಬಳಿ ನಡೆದ ಆತ್ಮಾಹುತಿ ದಾಳಿಯಲ್ಲಿ ಐವರು ಚೀನೀ ಪ್ರಜೆಗಳು ಮತ್ತು ಅವರ ಚಾಲಕ ಸಾವನ್ನಪ್ಪಿದ್ದರು. ಮೇ ತಿಂಗಳಲ್ಲಿ ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಮೊಹಮ್ಮದ್ ಇಶಾಕ್ ದಾರ್ ಬೀಜಿಂಗ್‌ಗೆ ಭೇಟಿ ನೀಡಿ ಮಾರ್ಚ್ ದಾಳಿಗೆ ಕಾರಣರಾದವರನ್ನು ಪತ್ತೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಕೊನೆಗೆ ಪ್ರಕರಣಕ್ಕೆ ಸಂಬಂಧವಿರದ ಹನ್ನೊಂದು ಜನ ಅಮಾಯಕರನ್ನು ಬಂಧಿಸಿ, ದಾಳಿಯ ಹೊಣೆ ಹೊತ್ತುಕೊಳ್ಳುವಂತೆ ಒತ್ತಾಯಿಸಲಾಯಿತು.

ಪಾಕಿಸ್ತಾನದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಚೀನಾದ ಪ್ರಜೆಗಳು ಕೊಲ್ಲಲ್ಪಟ್ಟಾಗಲೆಲ್ಲಾ ಅದಕ್ಕೆ ಪ್ರತಿಯಾಗಿ ಹಣಕಾಸಿನ ರೂಪದಲ್ಲಿ ತನಗೆ ಪರಿಹಾರ ಪಾವತಿಸುವಂತೆ ಚೀನಾ ಒತ್ತಾಯಿಸಿದೆ. ಈ ಬಾರಿ ಚೀನಾ ಎಷ್ಟು ಹಣಕ್ಕೆ ಬೇಡಿಕೆ ಇಟ್ಟಿದೆ ಎಂಬುದು ತಿಳಿದಿಲ್ಲ. ಇದಲ್ಲದೆ, ಪಾಕಿಸ್ತಾನವು ಫೂಲ್-ಪ್ರೂಫ್ ಭದ್ರತೆಯನ್ನು ಒದಗಿಸದಿದ್ದರೆ ಯೋಜನೆಗಳನ್ನು ನಿಧಾನಗೊಳಿಸುವುದಾಗಿ ಚೀನಾ ಬೆದರಿಕೆ ಹಾಕಿದೆ. ಸಿಪಿಇಸಿ ಯೋಜನೆಯು ಬಲೂಚ್​ನ ಪ್ರದೇಶವನ್ನು ವಶಪಡಿಸಿಕೊಳ್ಳುವುದರಿಂದ ಅಲ್ಲಿನ ಜನ ಇದನ್ನು ವಿರೋಧಿಸುತ್ತಿದ್ದಾರೆ. ಗ್ವಾದರ್ ಅನ್ನು ಚೀನೀಯರಿಗೆ ಹಸ್ತಾಂತರಿಸುವುದರ ವಿರುದ್ಧ ಬಲೂಚ್​ ಜನ ನಿರಂತರವಾಗಿ ಹೋರಾಡುತ್ತಿದ್ದರೂ, ಅದನ್ನು ನಿರ್ಲಕ್ಷಿಸಲಾಗಿದೆ. ಬಲೂಚ್​ ಜನರ ಬೇಡಿಕೆ, ಸಮಸ್ಯೆಗಳ ಬಗ್ಗೆ ಚರ್ಚಿಸಲು ಸರ್ಕಾರ ನಿರಾಕರಿಸುತ್ತಿದೆ.

ಬಹುಶಃ ಸದ್ಯ ಎಸ್​ಸಿಒ ಶೃಂಗಸಭೆ ನಡೆಯುತ್ತಿರುವ ಕಾರಣದಿಂದ ಭಯೋತ್ಪಾದಕ ದಾಳಿಗೆ ಭಾರತದ ಗುಪ್ತಚರ ಸಂಸ್ಥೆ ರಾ ಕಾರಣ ಎಂದು ಪಾಕಿಸ್ತಾನ ದೂಷಿಸಿಲ್ಲ. ಕರಾಚಿಯಲ್ಲಿ ಭಯೋತ್ಪಾದನೆ ಮತ್ತು ರಾಜಕೀಯ ಭಯೋತ್ಪಾದನೆ ಪ್ರತಿಭಟನಾ ಕರೆಗಳು ಒಂದೇ ಆಗಿವೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಅದರ ಯೋಜನಾ ಸಚಿವ ಅಹ್ಸಾನ್ ಇಕ್ಬಾಲ್ ಹೇಳಿದ್ದಾರೆ. ಒಂದು ಕಡೆ ಸ್ಫೋಟಕ ದಾಳಿಗಳನ್ನು ನಡೆಸಲು ಭಯೋತ್ಪಾದಕರನ್ನು ಬಳಸುತ್ತಿದ್ದ ಮತ್ತು ಮತ್ತೊಂದೆಡೆ, ಅರಾಜಕತೆಯನ್ನು ಹರಡಲು ಮತ್ತು ಪಾಕಿಸ್ತಾನದ ಪ್ರಮುಖ ಹಿತಾಸಕ್ತಿಗಳನ್ನು ದುರ್ಬಲಗೊಳಿಸಲು ಪಿಟಿಐ ಅನ್ನು ಬಳಸುತ್ತಿದ್ದ ಅದೇ ವ್ಯಕ್ತಿ 'ಸ್ಕ್ರಿಪ್ಟ್ ರೈಟರ್' ಎಂದು ಅವರು ಹೇಳಿದರು.

ಈ ಹಂತದಲ್ಲಿ ಯಾವುದೇ ಅತಾರ್ಕಿಕ ಹೇಳಿಕೆಯು ಭಾರತದ ವಿದೇಶಾಂಗ ಸಚಿವರ ಇಸ್ಲಾಮಾಬಾದ್ ಭೇಟಿಯ ಮೇಲೆ ದುಷ್ಪರಿಣಾಮ ಬೀರಬಹುದು ಎಂಬುದು ಪಾಕಿಸ್ತಾನಕ್ಕೆ ತಿಳಿದಿದೆ. ಎಸ್​ಸಿಒ ಶೃಂಗಸಭೆಯ ನಂತರ ಬಹುಶಃ ಹಲವಾರು ಅಮಾಯಕರನ್ನು ಬಂಧಿಸಬಹುದು ಮತ್ತು ದಾಳಿಗೆ ಹೊಣೆ ಹೊತ್ತುಕೊಳ್ಳುವಂತೆ ಅವರ ಮೇಲೆ ಒತ್ತಡ ಹೇರಬಹುದು.

ವಿವಿಧ ಅಪಾಯಗಳ ಕಾರಣದಿಂದ ಪಾಕಿಸ್ತಾನ ಕುಸಿಯುತ್ತಿದೆ. ಇಮ್ರಾನ್ ಖಾನ್ ಅವರ ಪಿಟಿಐ ದೇಶದಲ್ಲಿ ರಾಜಕೀಯ ಬದಲಾವಣೆ ತರಲು, ತನ್ನ ನಾಯಕನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಮತ್ತು ಪ್ರಸ್ತುತ ಅವ್ಯವಸ್ಥೆಗೆ ಸೇನಾ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಒತ್ತಾಯಿಸುತ್ತಿದೆ. ಪಾಕಿಸ್ತಾನದ ಆಂತರಿಕ ಅವ್ಯವಸ್ಥೆಯನ್ನು ಎತ್ತಿ ತೋರಿಸಲು ಎಸ್​ಸಿಒ ಶೃಂಗಸಭೆಯನ್ನು ಬಳಸಿಕೊಳ್ಳಲು ಪಿಟಿಐ ಹವಣಿಸುತ್ತಿದೆ.

ಟಿಟಿಪಿ (ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್) ಭಯೋತ್ಪಾದಕ ಸಂಘಟನೆಯು ಖೈಬರ್ ಪಖ್ತುನಖ್ವಾ ಪ್ರದೇಶದಲ್ಲಿ ಶರಿಯಾ ಕಾನೂನು ಜಾರಿ ಮಾಡಬೇಕೆಂದು ಒತ್ತಾಯಿಸುತ್ತಿದೆ. ಬಲೂಚ್ ಜನರು ಪಾಕಿಸ್ತಾನದ ಅಕ್ರಮ ಹಿಡಿತದಿಂದ ಸ್ವಾತಂತ್ರ್ಯ ಬಯಸುತ್ತಿರುವುದರಿಂದ ಅವರು ತಮ್ಮ ಭೂಮಿಯಲ್ಲಿ ಸಿಪಿಇಸಿ ಯೋಜನೆಯನ್ನು ಜಾರಿಗೊಳಿಸುತ್ತಿರುವ ಚೀನೀಯರ ಮೇಲೆ ದಾಳಿ ನಡೆಸುತ್ತಿದ್ದಾರೆ. ಟಿಟಿಪಿ ಮತ್ತು ಬಲೂಚ್ ತಮ್ಮದೇ ಆದ ಪ್ರದೇಶಗಳಲ್ಲಿ ಸಕ್ರಿಯವಾಗಿವೆ ಮಾತ್ರವಲ್ಲದೆ ದೇಶದ ಉದ್ದಗಲಕ್ಕೂ ವ್ಯಾಪಿಸಿವೆ ಎಂಬುದನ್ನು ಇತ್ತೀಚಿನ ಘಟನೆಗಳು ತೋರಿಸಿವೆ.

ರಾಜಕೀಯ, ಧಾರ್ಮಿಕ ಮತ್ತು ಸ್ವಾತಂತ್ರ್ಯ ಚಳವಳಿಗಳ ಪ್ರತಿಭಟನೆಗಳು ಮತ್ತು ಹಿಂಸಾಚಾರಗಳು ತೀವ್ರವಾಗಿದ್ದು, ಹಣದ ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ಇವನ್ನು ನಿಯಂತ್ರಿಸುವುದು ಬಹಳೇ ಕಷ್ಟಕರವಾಗಿದೆ. ಪಾಕಿಸ್ತಾನದ ಸರ್ಕಾರವು ಪಿಟಿಐ ಮತ್ತು ನ್ಯಾಯಾಂಗ ಸೇರಿದಂತೆ ಅವರಿಗೆ ಅನುಕೂಲಕರವಾದ ರಾಜ್ಯ ಸಂಸ್ಥೆಗಳನ್ನು ಹತ್ತಿಕ್ಕುವಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದೆ. ಆ ಮೂಲಕ ತನ್ನ ಸಮ್ಮಿಶ್ರ ಸರ್ಕಾರವನ್ನು ಭದ್ರಗೊಳಿಸುವ ಉದ್ದೇಶ ಸರ್ಕಾರಕ್ಕಿದೆ.

ಹದಗೆಡುತ್ತಿರುವ ಆರ್ಥಿಕತೆಯ ಮಧ್ಯೆ ಪ್ರತಿಭಟನೆಗಳು ಹಿಂಸಾತ್ಮಕವಾಗಬಹುದು ಮತ್ತು ಬಾಂಗ್ಲಾದೇಶದಲ್ಲಿ ಆದಂತೆ ದೇಶದಲ್ಲೂ ಆಗಬಹುದು ಎಂಬುದು ಪಾಕಿಸ್ತಾನ ನಾಯಕತ್ವಕ್ಕೆ ತಿಳಿದಿದೆ. ಹೀಗಾಗಿ ಏನೇ ಆದರೂ ಪಾಕಿಸ್ತಾನವು ಹಿಂಸಾಚಾರವನ್ನು ತಡೆಯಲೇಬೇಕಿದೆ. ಸೇನಾಪಡೆಯೊಳಗೆಯೇ ಇಮ್ರಾನ್ ಖಾನ್ ಅವರನ್ನು ಬೆಂಬಲಿಸುವ ಜನರಿದ್ದಾರೆ ಎಂಬುದು ಸರ್ಕಾರಕ್ಕೆ ತಿಳಿದಿದೆ. ಜೈಲಿನಲ್ಲಿದ್ದಷ್ಟೂ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂಬುದು ಗೊತ್ತಿರುವ ಖಾನ್ ಕಂಬಿಗಳ ಹಿಂದೆ ದಿನ ಕಳೆಯುತ್ತಿದ್ದಾರೆ.

ಇಸ್ಲಾಮಾಬಾದ್, ರಾವಲ್ಪಿಂಡಿ ಮತ್ತು ಲಾಹೋರ್ ಪ್ರದೇಶಗಳಲ್ಲಿ ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಒತ್ತು ನೀಡುವ ಮಧ್ಯೆ ಇತರ ಪ್ರಾಂತ್ಯಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಇದು ಟಿಟಿಪಿ ಮತ್ತು ಬಲೂಚ್ ಆರ್ಮಿ ಮತ್ತೆ ಬಲಶಾಲಿಯಾಗಲು ಅವಕಾಶ ನೀಡುತ್ತಿದೆ. ಇದಲ್ಲದೆ, ಎಸ್ ಸಿಒ ಸಭೆಯ ದಿನ ಹತ್ತಿರವಾಗುತ್ತಿರುವುದರಿಂದ ಪಾಕಿಸ್ತಾನವು ತನ್ನ ರಾಜಧಾನಿಯಲ್ಲಿ ಅಥವಾ ಅದರ ಸಮೀಪದಲ್ಲಿ ಭಯೋತ್ಪಾದಕ ದಾಳಿಯಾಗದಂತೆ ನೋಡಿಕೊಳ್ಳಬೇಕಿದೆ.

ಎಸ್​ಸಿಒ ಶೃಂಗಸಭೆ ನಡೆಸುತ್ತಿರುವ ಪಾಕಿಸ್ತಾನವು ಸದ್ಯ ಪ್ರಾದೇಶಿಕವಾಗಿ ಎಲ್ಲರ ಗಮನ ಸೆಳೆದಿದೆ. ಭಯೋತ್ಪಾದನೆಯನ್ನು ದೂರವಿಟ್ಟು, ತನ್ನ ರಾಜಕೀಯ ವರ್ಗದಲ್ಲಿ ಏಕತೆಯನ್ನು ಪ್ರದರ್ಶಿಸುವ ಸಮಯ ಇದಾಗಿದೆ. ಆದರೆ ದೇಶವು ಎರಡೂ ವಿಷಯಗಳಲ್ಲಿ ವಿಫಲವಾಗಿದೆ. ತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವುದರ ಬದಲಾಗಿ ಹೆಚ್ಚುತ್ತಿರುವ ರಾಜಕೀಯ ಅತೃಪ್ತಿ, ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ನಿಯಂತ್ರಿಸಲು ಹೆಣಗಾಡುತ್ತಿರುವ ಅಸ್ಥಿರ ಪಾಕಿಸ್ತಾನ ಈಗ ಜಗತ್ತಿಗೆ ಕಾಣಿಸುತ್ತಿದೆ.

ಲೇಖನ: ಹರ್ಷ ಕಾಕರ್ (ನಿವೃತ್ತ ಮೇಜರ್ ಜನರಲ್)

ಇದನ್ನೂ ಓದಿ: ಅ.15 ರಂದು ಪಾಕಿಸ್ತಾನದಾದ್ಯಂತ ಪಿಟಿಐ ಪ್ರತಿಭಟನೆ: ಶಾಂಘೈ ಶೃಂಗಸಭೆಗೆ ಎದುರಾಯ್ತು ಸಂಕಷ್ಟ

ABOUT THE AUTHOR

...view details