ಇಸ್ಲಾಮಾಬಾದ್, ಪಾಕಿಸ್ತಾನ:ಪಾಕ್ನಲ್ಲಿ ಮತ್ತೊಂದು ಪೋಲಿಯೊ ಪ್ರಕರಣ ವರದಿಯಾಗಿದ್ದು, ದೇಶದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ 40ಕ್ಕೆ ಏರಿದೆ. ಖೈಬರ್ ಪಖ್ತುಂಖ್ವಾದ ಕೊಹತ್ ಜಿಲ್ಲೆಯ ಮಗುವಿಗೆ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ದೇಶದಲ್ಲಿ ಈವರೆಗಿನ ಪೋಲಿಯೊ ಪ್ರಕರಣಗಳ ಸಂಖ್ಯೆ 40ಕ್ಕೆ ಏರಿಯಾಗಿದೆ ಎಂದು ಎನ್ಐಹೆಚ್ (ರಾಷ್ಟ್ರೀಯ ಆರೋಗ್ಯ ಸಂಸ್ಥೆ) ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇದು ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.
ದಾರಾ ಆಡಮ್‌ಖೇಲ್‌ಗೆ ಸೇರಿದ ಎರಡೂವರೆ ವರ್ಷದ ಮಗುವಿನಲ್ಲಿ ಟೈಪ್-1 ಪೋಲಿಯೊ ವೈರಸ್ ಪತ್ತೆಯಾಗಿದ್ದು, ಕೊಹತ್ ಜಿಲ್ಲೆಯಲ್ಲಿ ಕಂಡು ಬರುತ್ತಿರುವ ಎರಡನೇ ಪ್ರಕರಣ ಇದಾಗಿದೆ. ಇದೇ ತಿಂಗಳ ಆರಂಭದಲ್ಲಿ, ಜಿಲ್ಲೆಯ ಮತ್ತೊಂದು ಮಗುವಿಗೆ ವೈರಸ್ ಇರುವುದು ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನಲ್ಲಿರುವ ಪೋಲಿಯೊ ನಿರ್ಮೂಲನೆಗಾಗಿ ಪ್ರಾದೇಶಿಕ ಉಲ್ಲೇಖ ಪ್ರಯೋಗಾಲಯವು ಮಗುವಿನಲ್ಲಿ ಪೋಲಿಯೊ ವೈರಸ್ ಟೈಪ್ 1 (ಡಬ್ಲ್ಯುಪಿವಿ 1) ಇರುವಿಕೆಯನ್ನು ದೃಢಪಡಿಸಿದೆ. ಕೊಹತ್ನ ನಾಲ್ಕು ಒಳಚರಂಡಿ ಮಾದರಿಗಳಲ್ಲಿ ಪೋಲಿಯೊ ವೈರಸ್ ಇರುವುದು ಪತ್ತೆಯಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಪೋಲಿಯೊ ಪ್ರಕರಣಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಗುತ್ತಿದೆ.
2024ರಲ್ಲಿ ಪಾಕಿಸ್ತಾನದಿಂದ ವರದಿಯಾದ 40ನೇ ಪೋಲಿಯೊ ಪ್ರಕರಣ ಇದಾಗಿದ್ದು, ಅಕ್ಟೋಬರ್ 19 ರಂದು ಸಿಂಧ್ ಪ್ರಾಂತ್ಯದ ಸಂಘರ್ ಮತ್ತು ಮಿರ್ಪುರ್ಖಾಸ್ ಜಿಲ್ಲೆಗಳಿಂದ ಎರಡು ಹೊಸ ಪೋಲಿಯೊ ಪ್ರಕರಣಗಳು ವರದಿಯಾಗಿದ್ದವು. ಇದರ ನಿಯಂತ್ರಣಕ್ಕಾಗಿ ರಾಷ್ಟ್ರವ್ಯಾಪಿ ಪೋಲಿಯೊ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅಕ್ಟೋಬರ್ 25ರಿಂದ ವಿವಿಧ ಹಂತದಲ್ಲಿ ಪ್ರಾರಂಭವಾಗಲಿದೆ.