ಇಸ್ಲಾಮಾಬಾದ್:ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಿತ ಅಭ್ಯರ್ಥಿ ಅಲಿ ಅಮೀನ್ ಗಂಡಾಪುರ್ ಅವರು ಖೈಬರ್ ಪಖ್ತುನಖ್ವಾ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಶುಕ್ರವಾರ ಆಯ್ಕೆಯಾಗಿದ್ದಾರೆ. ಹಾಗೆಯೇ ಪಿಎಂಎಲ್-ಎನ್ ನ ಸರ್ದಾರ್ ಅಯಾಜ್ ಸಾದಿಕ್ ಅವರು ರಾಷ್ಟ್ರೀಯ ಅಸೆಂಬ್ಲಿ (ಸಂಸತ್ತು)ಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
ಫೆಬ್ರವರಿ 8 ರ ಸಾರ್ವತ್ರಿಕ ಚುನಾವಣೆಯಲ್ಲಿ ನಡೆದ ವ್ಯಾಪಕ ಅಕ್ರಮಗಳಲ್ಲಿ ಪಾಕಿಸ್ತಾನದ ಮುಖ್ಯ ಚುನಾವಣಾ ಆಯುಕ್ತ ಸಿಕಂದರ್ ಸುಲ್ತಾನ್ ರಾಜಾ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ನೂತನ ಮುಖ್ಯಮಂತ್ರಿ ಗಂಡಾಪುರ್, ಆಯುಕ್ತರು ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಪಿಟಿಐ ಮಹಿಳಾ ಅಭ್ಯರ್ಥಿಗಳ ವಿರುದ್ಧದ ಎಫ್ಐಆರ್ಗಳನ್ನು ರದ್ದುಗೊಳಿಸುವಂತೆ ಮತ್ತು ಮೇ 9 ರ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ ಅವರನ್ನು ಅಲಿ ಅಮೀನ್ ಗಂಡಾಪುರ್ ಕೋರಿದ್ದಾರೆ.
ಪಿಟಿಐ ಸ್ಥಾಪಕ ಇಮ್ರಾನ್ ಖಾನ್ ಅವರ ಮೇಲಿನ ಆರೋಪಗಳ ಬಗ್ಗೆ ನ್ಯಾಯಯುತ ವಿಚಾರಣೆ ನಡೆಸಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು. ಇಮ್ರಾನ್ ಖಾನ್ ಅವರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವುದಾಗಿ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.