ಇಸ್ಲಾಮಾಬಾದ್: ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖಂಡ ಶಹಬಾಜ್ ಗಿಲ್ ಮತ್ತು ಯೂಟ್ಯೂಬರ್ ಮೊಯೀದ್ ಪಿರ್ಜಾದಾ ವಿರುದ್ಧ ಇಸ್ಲಾಮಾಬಾದ್ನ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (ಎಫ್ ಐಎ) ಸೈಬರ್ ಅಪರಾಧ ವಿಭಾಗವು ಪ್ರತ್ಯೇಕ ಪ್ರಕರಣಗಳಡಿ ದೂರು ದಾಖಲಿಸಿಕೊಂಡಿದೆ. ದೇಶ ವಿರೋಧಿ ಚಟುವಟಿಕೆಗಳನ್ನು ಉತ್ತೇಜಿಸಿದ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ದೇಶ ಮತ್ತು ಅದರ ಸಂಸ್ಥೆಗಳ ವಿರುದ್ಧ ಪ್ರಚಾರ ಮಾಡಿದ ಆರೋಪದ ಮೇಲೆ ದೂರುಗಳು ದಾಖಲಾಗಿವೆ ಎಂದು ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ವಿದೇಶದಲ್ಲಿ ನೆಲೆಸಿರುವ ಈ ಇಬ್ಬರೂ ಆರೋಪಿಗಳು ದೇಶ ವಿರೋಧಿ ಚಟುವಟಿಕೆಗಳು ಮತ್ತು ಪ್ರಚಾರದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ ಎಂದು ಹೇಳಿರುವ ಎಫ್ಐಎ, ಇವರೊಂದಿಗೆ ಮತ್ತೆ ಯಾರಾದರೂ ಸಹಚರರು ಇದ್ದಾರಾ ಎಂಬುದು ತನಿಖೆಯ ನಂತರ ಗೊತ್ತಾಗಬೇಕಿದೆ ಎಂದು ಹೇಳಿದೆ. ಇವರಿಬ್ಬರ ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಬಗ್ಗೆ ಎಫ್ಐಎ ತನಿಖೆ ನಡೆಸುತ್ತಿದೆ.
ಆರೋಪಗಳನ್ನು ದೃಢಪಡಿಸಿದ ನಂತರ, ಸಬ್ ಇನ್ ಸ್ಪೆಕ್ಟರ್ ಮುನೀಬ್ ಜಾಫರ್ ಅವರ ದೂರಿನ ಮೇರೆಗೆ ಪಿಇಸಿಎ -2016 ಸೈಬರ್ ಅಪರಾಧ ಕಾಯ್ದೆಯ ಸೆಕ್ಷನ್ 9, 10 ಮತ್ತು 11ರ ಅಡಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಟಿಕ್ ಟಾಕ್ ಖಾತೆಗಳ ಮೂಲಕ ಸರ್ಕಾರದ ವಿರುದ್ಧ ಪ್ರಚಾರ ಮಾಡಲಾಗುತ್ತಿದೆ ಎಂಬುದು ಇತರ ಅನೇಕ ಆರೋಪಗಳ ಪೈಕಿ ಒಂದು ಆರೋಪವಾಗಿದೆ.