ಇಸ್ಲಾಮಾಬಾದ್/ಕಾಬೂಲ್:ಅಫ್ಘಾನಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ಇದು ಉಭಯ ರಾಷ್ಟ್ರಗಳ ನಡುವೆ ಭಾರಿ ತಿಕ್ಕಾಟಕ್ಕೆ ಕಾರಣವಾಗಿದೆ.
ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ 8 ನಾಗರಿಕರು ಹತರಾಗಿದ್ದಾರೆ ಎಂದು ಆಫ್ಘನ್ನ ತಾಲಿಬಾನ್ ಸರ್ಕಾರ ಹೇಳಿದೆ. ಪಾಕಿಸ್ತಾನ ಇದನ್ನು ನಿರಾಕರಿಸಿದ್ದು, ಮೋಸ್ಟ್ ವಾಂಟೆಡ್ ಉಗ್ರ ಸೇರಿದಂತೆ 8 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿಕೆ ನೀಡಿದೆ. ಪಾಕಿಸ್ತಾನದ ಗಡಿಯ ಖೈಬರ್ ಪಖ್ತುಂಖ್ವಾ ಪ್ರದೇಶದ ಪಕ್ಟಿಕಾ ಮತ್ತು ಖೋಸ್ಟ್ ಪ್ರಾಂತ್ಯಗಳಲ್ಲಿ ಈ ದಾಳಿಗಳು ನಡೆದಿವೆ ಎಂದು ಅಫ್ಘಾನಿಸ್ತಾನದ ಸರ್ಕಾರಿ ಅಧಿಕಾರಿ ಸೋಮವಾರ ದೃಢಪಡಿಸಿದ್ದಾರೆ. ನೆರೆ ರಾಷ್ಟ್ರದ ವಿಮಾನಗಳು ಭಾನುವಾರ ಬೆಳಗ್ಗೆ 3 ಗಂಟೆ ಸುಮಾರಿನಲ್ಲಿ ಸೀಮೆ ದಾಟಿ ಬಂದು ವಾಯುದಾಳಿ ನಡೆಸಿವೆ. ನಾಗರಿಕರ ಮನೆಗಳ ಮೇಲೆ ಬಾಂಬ್ ದಾಳಿ ನಡೆಸಿವೆ. ಮೃತ 8 ಮಂದಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಇದ್ದಾರೆ ಎಂದು ತಾಲಿಬಾನ್ ತಿಳಿಸಿದೆ.
ನಾಗರಿಕರ ಮನೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ ತಾಲಿಬಾನ್, ಪಕ್ಟಿಕಾದಲ್ಲಿ ಮನೆ ಕುಸಿದು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಸಾವನ್ನಪ್ಪಿದ್ದರೆ, ಖೋಸ್ಟ್‌ನಲ್ಲಿ ಒಂದು ಮನೆ ಕುಸಿತದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದಿದೆ.
ಪಾಕಿಸ್ತಾನನದಲ್ಲಿನ ಸಮಸ್ಯೆಗಳು ಮತ್ತು ಹಿಂಸಾತ್ಮಕ ದಾಳಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿ ಅಲ್ಲಿನ ಸರ್ಕಾರ ವೃಥಾ ಅಫ್ಘಾನಿಸ್ತಾನದ ಮೇಲೆ ಗೂಬೆ ಕೂರಿಸುತ್ತಿದೆ. ಇಂತಹ ಭೀಕರ ಕೃತ್ಯಗಳಿಗೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.