ಇಸ್ಲಾಮಾಬಾದ್:ಪಾಕಿಸ್ತಾನದಲ್ಲಿ ಎರಡು ಪ್ರತ್ಯೇಕ ಬಸ್ ಅಪಘಾತಗಳಲ್ಲಿ 36 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.
ಬಲೂಚಿಸ್ತಾನದ ನೈಋತ್ಯ ಪ್ರಾಂತ್ಯದ ಮಕ್ರಾನ್ ಕರಾವಳಿ ಹೆದ್ದಾರಿಯಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಆಂತರಿಕ ಸಚಿವಾಲಯ ಭಾನುವಾರ ತಿಳಿಸಿದೆ. ಆದರೆ, ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಬಳಿ ಬಸ್ ಆಳವಾದ ಕಂದಕಕ್ಕೆ ಉರುಳಿ 24 ಜನರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇರಾನ್‌ನಿಂದ ಹಿಂದಿರುಗುತ್ತಿದ್ದ ಶಿಯಾ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತಕ್ಕೆ ಈಡಾಗಿದೆ. ಈ ಘಟನೆಯಲ್ಲಿ 32 ಜನರು ಗಾಯಗೊಂಡಿದ್ದಾರೆ. ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದ ಕಹುತಾ ಜಿಲ್ಲೆಯಲ್ಲಿ ಎರಡನೇ ಅಪಘಾತ ನಡೆದಿದೆ. PoJK ಕಡೆಗೆ ಹೋಗುತ್ತಿತ್ತು ಎಂದು ಹೇಳಲಾಗುತ್ತಿದೆ. ಪ್ರಾಥಮಿಕ ವರದಿ ಪ್ರಕಾರ ಏಳು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ ನಂತರ ವೈದ್ಯರು ಮತ್ತು ಸರ್ಕಾರಿ ಅಧಿಕಾರಿಗಳು ಅಪಘಾತದಲ್ಲಿ ಬಸ್‌ನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಕೋಸ್ಟರ್‌ನ ಬ್ರೇಕ್ ವಿಫಲವಾದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ರಕ್ಷಣಾ ಅಧಿಕಾರಿ ಉಸ್ಮಾನ್ ಗುಜ್ಜರ್ ಅಲ್ಲಿನ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಪ್ರತ್ಯೇಕ ಹೇಳಿಕೆಗಳಲ್ಲಿ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಪಾಕ್ ಆಂತರಿಕ ವ್ಯವಹಾರಗಳ ಸಚಿವ ಮೊಹ್ಸಿನ್ ನಖ್ವಿ ಕೂಡ ಎರಡೂ ಅಪಘಾತಗಳಲ್ಲಿ ಮೃತರ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪ ಮತ್ತು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಮಾಧ್ಯಮವೊಂದರ ವರದಿ ಪ್ರಕಾರ, ಪ್ರತಿ ವರ್ಷ ಸುಮಾರು 9,000 ಘಟನೆಗಳು ವರದಿಯಾಗುತ್ತವೆ. ಇದರಲ್ಲಿ 5,000 ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತವೆ ಎಂದು ಅವರು ಹೇಳಿದ್ದಾರೆ, ಈ ವಾರದ ಆರಂಭದಲ್ಲಿ, ಪಾಕಿಸ್ತಾನಿ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಮಧ್ಯ ಇರಾನ್‌ನಲ್ಲಿ ಪಲ್ಟಿ ಹೊಡೆದು 28 ಪ್ರಯಾಣಿಕರು ಸಾವನ್ನಪ್ಪಿದ್ದರು. ಸುಮಾರು 23 ಜನರು ಗಾಯಗೊಂಡಿದ್ದರು.
ಇನ್ನು ಮಂಗಳವಾರ ರಾತ್ರಿ ಯಜ್ದ್ ಪ್ರಾಂತ್ಯದ ಚೆಕ್‌ಪಾಯಿಂಟ್‌ನ ಮುಂದೆ ಉರುಳಿಬಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು ಎಂದು ಇರಾನ್ ರಾಜ್ಯ ಟಿವಿ ವರದಿ ಮಾಡಿದೆ. ಸಂತ್ರಸ್ತರ ಮೃತದೇಹಗಳನ್ನು ಪಾಕಿಸ್ತಾನದ ಮಿಲಿಟರಿ ವಿಮಾನದಲ್ಲಿ ಶನಿವಾರ ಸಂಬಂಧಪಟ್ಟವರ ಮನೆಗೆ ರವಾನಿಸಲಾಗಿದೆ. ಸಾವಿರಾರು ಶಿಯಾ ಮುಸ್ಲಿಮರು ಇರಾಕ್‌ನ ಪವಿತ್ರ ನಗರವಾದ ಕರ್ಬಲಾಕ್ಕೆ ಪ್ರಯಾಣಿಸುತ್ತಾರೆ, ಇಸ್ಲಾಂ ಪಂಥದ ಕೇಂದ್ರ ವ್ಯಕ್ತಿಯಾಗಿರುವ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಹುಸೇನ್ ಅವರ ಮರಣದ ನಂತರದ ವಾರ್ಷಿಕ 40 ದಿನಗಳ ಶೋಕಾಚರಣೆಯ ಅಂತ್ಯವನ್ನು ಸೂಚಿಸುವ ನಿಟ್ಟಿನಲ್ಲಿ ಈ ಆಚರಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಇದನ್ನು ಓದಿ:ಮಲಯಾಳಂ ನಟಿಯರ ಮೇಲೆ ದೌರ್ಜನ್ಯ ಆರೋಪ: ತನಿಖೆಗೆ ವಿಶೇಷ ತಂಡ ರಚಿಸಿದ ಕೇರಳ ಸರ್ಕಾರ - Sexual Assault Allegations