ಇಸ್ಲಾಮಾಬಾದ್ (ಪಾಕಿಸ್ತಾನ):ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಪ್ರಕರಣದಲ್ಲಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ವಿಧಿಸಿದ್ದ 14 ವರ್ಷಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್ ಅಮಾನತುಗೊಳಿಸಿದೆ. ತೋಷಖಾನಾ ಪ್ರಕರಣದಲ್ಲಿ ಶಿಕ್ಷೆಯ ವಿರುದ್ಧದ ಅರ್ಜಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ. ಬಳಿಕ ಶಿಕ್ಷೆಯ ವಿರುದ್ಧದ ಅವರ ಮೇಲ್ಮನವಿಗಳನ್ನು ಮುಂದಿನ ತಿಂಗಳು ಈದ್ ಹಬ್ಬದ ನಂತರ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಘೋಷಿಸಿದೆ.
ಖಾನ್ ಅವರು ಇತರ ಪ್ರಕರಣಗಳಲ್ಲಿ ಅಪರಾಧಿ ಆಗಿರುವುದರಿಂದ ಅವರನ್ನು ಬಿಡುಗಡೆ ಮಾಡಲಾಗುವುದಿಲ್ಲ ಮತ್ತು ಇತರ ಪ್ರಕರಣಗಳಲ್ಲಿನ ಆರೋಪಗಳಿಂದ ಮುಕ್ತರಾಗುವವರೆಗೆ ಬಿಡುಗಡೆ ಸಾಧ್ಯವಿಲ್ಲ. ಅದೇ ರೀತಿ ಬುಶ್ರಾ ಕೂಡ ಮತ್ತೊಂದು ಪ್ರಕರಣದಲ್ಲಿ ದೋಷಿಯಾಗಿದ್ದು, ಶಿಕ್ಷೆಯನ್ನು ಅಮಾನತುಗೊಳಿಸಿದ ನಂತರ ಬಿಡುಗಡೆ ಆಗದಿರಬಹುದು.
ಇನ್ನು, ನ್ಯಾಯಾಲಯದ ಆದೇಶದಿಂದಾಗಿ ಇಮ್ರಾನ್ ಖಾನ್ ಶಿಕ್ಷೆಯಿಂದ ಪಾರಾಗಿದ್ದಾರೆ. ಆದರೆ ಅವರು ಮತ್ತು ಅವರ ಪತ್ನಿ ಬುಶ್ರಾ ಮುಂದಿನ 10 ವರ್ಷಗಳವರೆಗೆ ಯಾವುದೇ ಸಾರ್ವಜನಿಕ ಸ್ಥಾನವನ್ನು ಹೊಂದಲು ಸಾಧ್ಯವಾಗುವುದಿಲ್ಲ. ತೋಷಖಾನಾ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ಸಾರ್ವತ್ರಿಕ ಚುನಾವಣೆಗೂ ಮುನ್ನ ಪಾಕಿಸ್ತಾನದ ಎನ್‌ಎಬಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿತ್ತು. ಇದಾದ ಕೇವಲ ಒಂದು ದಿನದ ಬಳಿಕ ಮದುವೆಗೆ ಸಂಬಂಧಿಸಿದ ಪ್ರಕರಣದಲ್ಲಿ ಇಬ್ಬರಿಗೂ ಪ್ರತ್ಯೇಕವಾಗಿ ಹೆಚ್ಚುವರಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.