ಅಬುಧಾಬಿ (ಯುಎಇ):ಅಬುಧಾಬಿಯ ಸ್ವಾಮಿ ನಾರಾಯಣ ದೇಗುಲವು ವಿಶ್ವ ಮಾನವತೆ, ಜಾಗತಿಕ ಕೋಮು ಸೌಹಾರ್ದತೆಯ ಪ್ರತೀಕ. ಯುಎಇ ಸರ್ಕಾರ ಮಾನವ ಇತಿಹಾಸದಲ್ಲಿ 'ಸುವರ್ಣ ಇತಿಹಾಸ'ವನ್ನು ಬರೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಈಚೆಗೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಅಪಾರ ಸಂತಸ ತಂದಿತ್ತು. ಅದೀಗ ಅಬುಧಾಬಿಯಲ್ಲಿ ದುಪ್ಪಟ್ಟಾಗಿದೆ. ಅರಬ್ ಸಂಯುಕ್ತ ಸಂಸ್ಥಾನ (ಯುಎಇ)ದಲ್ಲಿ ಹಿಂದು ದೇಗುಲದ ಉದ್ಘಾಟನೆಗೆ ಸಾಕ್ಷಿಯಾದ ನಾನು ವಿಶೇಷ ಅನುಭೂತಿಗೆ ಒಳಗಾಗಿದ್ದೇನೆ ಎಂದು ಹೇಳಿದರು.
ವಿಶ್ವದ ಮೂರನೇ ಅತಿದೊಡ್ಡ ಹಿಂದು ದೇಗುಲ ಉದ್ಘಾಟನೆಯ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಅಬುಧಾಬಿಯಲ್ಲಿನ ಹಿಂದೂ ದೇಗುಲ ಮಾನವ ಇತಿಹಾಸದ ಅದ್ಭುತವಾಗಿದೆ. ಜಗತ್ತನ್ನೇ ಸಂಧಿಸುವ ಸಂಕೇತವಾಗಿದೆ. ಮಾನವೀಯತೆಯ ಉತ್ತಮ ಭವಿಷ್ಯದ ದಿನಗಳನ್ನು ಇದು ಸ್ವಾಗತಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.
ಬಾಪ್ಸ್ ಮಂದಿರವು ವಿಶ್ವದ ಕೋಮು ಸೌಹಾರ್ದತೆ ಮತ್ತು ಜಾಗತಿಕ ಏಕತೆಯ ಸಂಕೇತವಾಗಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಭೂಮಿಯಲ್ಲಿ ಹಿಂದು ದೇಗುಲ ನಿರ್ಮಾಣವಾಗಿದ್ದು, ಮಾನವ ಇತಿಹಾಸದ ಭವ್ಯ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ಇಂದು ಭವ್ಯವಾದ ದೇವಾಲಯ ಉದ್ಘಾಟನೆಯಾಗುವ ಮೂಲಕ ವರ್ಷಗಳ ಕಠಿಣ ಪರಿಶ್ರಮ ಸಾರ್ಥಕ ರೂಪ ಪಡೆದಿದೆ. ಇದು ಪೂಜಾ ಸ್ಥಳವಾಗದೇ ಕೋಮು ಸೌಹಾರ್ದತೆಯ ಧರ್ಮ ಕೇಂದ್ರವಾಗಲಿದೆ ಎಂದು ಭಾವಿಸುವೆ ಎಂದರು.