ಮೆಕ್ಸಿಕೋ: ವಿಮಾನ ಟೇಕ್ ಆಫ್ ಆಗಲು ತಡವಾದ ಕಾರಣಕ್ಕೆ ಪ್ರಯಾಣಿಕನೊಬ್ಬ ವಿಮಾನದ ತುರ್ತು ಬಾಗಿಲು ತೆರೆದು ಅದರ ರೆಕ್ಕೆಯ ಬಂದು ನಿಂತಿದ್ದ ಘಟನೆ ಮೆಕ್ಸಿಕೋ ಸಿಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆದರೆ, ಸಹ ಪ್ರಯಾಣಿಕರು ಈ ವ್ಯಕ್ತಿಯ ಕ್ರಮವನ್ನು ಬೆಂಬಲಿಸಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಏರೋ ಮೆಕ್ಸಿಕೋ ವಿಮಾನ AM672 ಗ್ವಾಟೆಮಾಲಾಗೆ ಬೆಳಗ್ಗೆ 8.45 ಕ್ಕೆ ಹೊರಡಬೇಕಿತ್ತು. ಕೆಲವು ಕಾರಣಗಳಿಂದ ವಿಮಾನದ ಟೇಕ್ ಆಫ್ ತಡವಾಯಿತು. ಸುಮಾರು 4 ಗಂಟೆಗೂ ಹೆಚ್ಚು ಕಾಲ ವಿಮಾನದಲ್ಲಿ ಕುಳಿತಿದ್ದ ಪ್ರಯಾಣಿಕರು ಪರದಾಡಿದರು. ಈ ವೇಳೆ ಪ್ರಯಾಣಿಕನೊಬ್ಬ ತುರ್ತು ಬಾಗಿಲು ತೆರೆದರು. ಅವರು ವಿಮಾನದ ರೆಕ್ಕೆಯ ಮೇಲೆ ಹೊರನಡೆದರು. ಆ ರೆಕ್ಕೆಯ ಮೇಲೆ ಕೆಲಹೊತ್ತು ನಿಂತಿದ್ದರು. ಸ್ವಲ್ಪ ಸಮಯದ ನಂತರ ಪ್ರಯಾಣಿಕ ವಿಮಾನದೊಳಗೆ ವಾಪಸ್ ಬಂದರು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಪ್ರಯಾಣಿಕರು, ವಿಮಾನ ವಿಳಂಬವಾದಾಗ ಗಾಳಿ ಅಥವಾ ನೀರು ಇಲ್ಲದೆ ನಾಲ್ಕು ಗಂಟೆಗಳ ಕಾಲ ಕಾಯುವಂತೆ ಮಾಡಿದೆ. ಗಾಳಿಯ ಕೊರತೆಯು ಪ್ರಯಾಣಿಕರ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ಪರಿಸ್ಥಿತಿಗಳನ್ನು ಸೃಷ್ಟಿಸಿತು. ಆ ಪ್ರಯಾಣಿಕನೋರ್ವ ವಿಮಾನದ ತುರ್ತು ಬಾಗಿಲು ತೆರೆದಿದ್ದರಿಂದ ಸ್ವಲ್ಪ ಗಾಳಿ ದೊರೆಯಿತು. ಅವರು ನಮ್ಮ ಜೀವಗಳನ್ನು ಉಳಿಸಿದ್ದಾರೆ. ಪ್ರಯಾಣಿಕ ಒಳ್ಳೆಯ ಕೆಲಸ ಮಾಡಿದ್ದಾನೆ ಎಂದು ಸಹಪ್ರಯಾಣಿಕರು ಬೆಂಬಲಿಸಿದರು. ಗ್ವಾಟೆಮಾಲಾಗೆ ಏರೋಮೆಕ್ಸಿಕೋ ವಿಮಾನದಲ್ಲಿದ್ದ ಕನಿಷ್ಠ 77 ಪ್ರಯಾಣಿಕರು ತಮ್ಮ ಹೇಳಿಕೆಯ ಲಿಖಿತ ಪತ್ರಕ್ಕೆ ಸಹಿ ಹಾಕಿದ ಫೋಟೋ ಹಾಗೂ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ಈ ಬಗ್ಗೆ ವಿಮಾನಯಾನ ಸಂಸ್ಥೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.