ಲಂಡನ್: ಮ್ಯಾಂಚೆಸ್ಟರ್ನಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ವರ್ಜಿನ್ ಅಟ್ಲಾಂಟಿಕ್ ವಿಮಾನದ ರೆಕ್ಕೆಯಲ್ಲಿನ ಬೋಲ್ಟ್ಗಳು ಕಾಣೆಯಾಗಿರುವುದನ್ನು ಪ್ರಯಾಣಿಕರೊಬ್ಬರು ಗಮನಿಸಿದ ನಂತರ ವಿಮಾನ ಹಾರಾಟವನ್ನು ರದ್ದುಪಡಿಸಲಾಯಿತು ಎಂದು ಮಾಧ್ಯಮಗಳು ಹೇಳಿವೆ. ಜನವರಿ 15ರಂದು ಯುಕೆಯ ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದಲ್ಲಿ, ವಿಮಾನದಲ್ಲಿದ್ದ 41 ವರ್ಷದ ಫಿಲ್ ಹಾರ್ಡಿ ಎಂಬವರು ವಿಮಾನದ ರೆಕ್ಕೆಯ ನಾಲ್ಕು ಬೋಲ್ಟ್ಗಳು ಕಾಣೆಯಾಗಿರುವುದನ್ನು ಗಮನಿಸಿ ಕ್ಯಾಬಿನ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಆಗ ಆ ವಿಮಾನ ಸಂಚಾರವನ್ನೇ ರದ್ದುಪಡಿಸಲಾಯಿತು.
ನಂತರ ಏರ್ಬಸ್ ಎ 330 ವಿಮಾನದ ನಿರ್ವಹಣಾ ತಪಾಸಣೆ ನಡೆಸಲು ತಕ್ಷಣ ಎಂಜಿನಿಯರ್ಗಳನ್ನು ಕರೆಸಲಾಯಿತು ಎಂದು ವರ್ಜಿನ್ ಅಟ್ಲಾಂಟಿಕ್ ಪ್ರತಿನಿಧಿಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಈ ವಿಮಾನ ನ್ಯೂಯಾರ್ಕ್ ನಗರದ ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಬೇಕಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಎಂಜಿನಿಯರ್ ಒಬ್ಬರು ವಿಮಾನದ ರೆಕ್ಕೆಯ ಮೇಲೆ ಹತ್ತಿ ಬೋಲ್ಟ್ ಸಮಸ್ಯೆಯನ್ನು ಸರಿಪಡಿಸುವುದು ಕಾಣಿಸುತ್ತದೆ. ಯಾವುದೇ ಸುರಕ್ಷತಾ ಸಮಸ್ಯೆ ಇಲ್ಲ ಎಂದು ವಿಮಾನಯಾನ ಸಿಬ್ಬಂದಿ ಪ್ರಯಾಣಿಕ ಫಿಲ್ ಹಾರ್ಡಿ ಅವರಿಗೆ ಪದೇ ಪದೇ ಭರವಸೆ ನೀಡಿದ್ದರೂ ಅವರಿಗೆ ಸಮಾಧಾನವಾಗಲಿಲ್ಲ. ಅಲಾಸ್ಕಾ ಏರ್ಲೈನ್ಸ್ನ ಬೋಯಿಂಗ್ 737 9 ಮ್ಯಾಕ್ಸ್ ವಿಮಾನದ ಒಂದು ಬಾಗಿಲು ಗಾಳಿಯಲ್ಲಿ ಹಾರಿ ಹೋಗಿದ್ದ ಘಟನೆ ಇತ್ತೀಚೆಗೆ ನಡೆದಿತ್ತು.
ಇಂಡಿಗೊ ವಿಮಾನದಲ್ಲಿ ತಾಂತ್ರಿಕ ದೋಷ: ಜೈಪುರದಿಂದ ಕೋಲ್ಕತ್ತಾ ಮಾರ್ಗದಲ್ಲಿ ಹಾರಾಟ ನಡೆಸುವ ಇಂಡಿಗೊ ವಿಮಾನವು ತಾಂತ್ರಿಕ ದೋಷದಿಂದಾಗಿ ಸೋಮವಾರ ಜೈಪುರಕ್ಕೆ ಮರಳಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. 6ಇ784 ವಿಮಾನವು ಕೋಲ್ಕತ್ತಾಗೆ ತೆರಳುತ್ತಿದ್ದಾಗ ತಾಂತ್ರಿಕ ದೋಷ ಪತ್ತೆಯಾಗಿದೆ. ಪೈಲಟ್ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ಅನುಸರಿಸಿ ವಿಮಾನವನ್ನು ಜೈಪುರಕ್ಕೆ ಮರಳಿಸಲಾಯಿತು ಎಂದು ಇಂಡಿಗೊ ವಕ್ತಾರರು ತಿಳಿಸಿದ್ದಾರೆ.
ವಿಮಾನವನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ಮೌಲ್ಯಮಾಪನ ಮತ್ತು ದುರಸ್ತಿಗಾಗಿ ಕಳುಹಿಸಲಾಗಿದೆ. ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿತ್ತು. ಜೈಪುರ-ಕೋಲ್ಕತಾ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಇಂಡಿಗೊ ಕ್ಷಮೆಯಾಚಿಸಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಬ್ಯಾಂಕಾಕ್ಗೆ ನೇರ ವಿಮಾನ: ಏಪ್ರಿಲ್ 9, 2024ರಿಂದ ಜಾರಿಗೆ ಬರುವಂತೆ ಮಂಗಳವಾರ, ಗುರುವಾರ ಮತ್ತು ಶನಿವಾರ ಹೀಗೆ ವಾರದಲ್ಲಿ ಮೂರು ದಿನಗಳ ಕಾಲ ವಿಶಾಖಪಟ್ಟಣಂನಿಂದ ಬ್ಯಾಂಕಾಕ್ಗೆ ಹೊಸ ನೇರ ವಿಮಾನಯಾನ ಆರಂಭಿಸುವುದಾಗಿ ಏರ್ ಏಷ್ಯಾ ಘೋಷಿಸಿದೆ. ವಿಮಾನ ಸಂಖ್ಯೆ. ಎಫ್ಡಿ 116 ಬ್ಯಾಂಕಾಕ್ (ಡಿಎಂಕೆ) ನಿಂದ ರಾತ್ರಿ 10.05 ಕ್ಕೆ (ಸ್ಥಳೀಯ ಸಮಯ) ಹೊರಟು ರಾತ್ರಿ 11.20 ಕ್ಕೆ (ಭಾರತೀಯ ಕಾಲಮಾನ) ವೈಜಾಗ್‌ಗೆ (ವಿಟಿಜೆಡ್) ಇಳಿಯಲಿದೆ. ಎಫ್ಡಿ 117 ವಿಶಾಖಪಟ್ಟಣಂನಿಂದ ರಾತ್ರಿ 11.50ಕ್ಕೆ ಹೊರಟು ಸ್ಥಳೀಯ ಕಾಲಮಾನ ಬೆಳಗ್ಗೆ 4.15ಕ್ಕೆ ಬ್ಯಾಂಕಾಕ್ ತಲುಪಲಿದೆ.
ಇದನ್ನೂ ಓದಿ : ಶ್ರೀರಾಮ ಪ್ರಾಣ ಪ್ರತಿಷ್ಠಾ ಸಮಾರಂಭ; ವಿಶ್ವದೆಲ್ಲೆಡೆ ಸಂಭ್ರಮಾಚರಣೆ