ಕೀವ್: ಉಕ್ರೇನ್ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿಅವರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ. ಈ ಆಹ್ವಾನ ಸ್ವೀಕರಿಸಿರುವ ಝೆಲೆನ್ಸ್ಕಿ, ಮಹಾನ್ ದೇಶಕ್ಕೆ ಪ್ರಯಾಣಿಸುವುದಕ್ಕೆ ಸಂತಸವಾಗುತ್ತದೆ ಎಂದಿದ್ದಾರೆ.
ಉಕ್ರೇನ್ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಕುರಿತು ವಿಶಾಲ ಚರ್ಚೆ ನಡೆಸಿದ ಬಳಿಕ ಮೋದಿ ಆಹ್ವಾನ ನೀಡಿದ್ದಾರೆ. ಉಕ್ರೇನ್ ಸ್ವಾತಂತ್ರ್ಯಗೊಂಡ ಬಳಿಕ ಭಾರತದಿಂದ ಮೊದಲ ಬಾರಿ ಪ್ರಧಾನಿ ಭೇಟಿ ನೀಡಿದ್ದು, ಇಲ್ಲಿ ಮೋದಿ ಅವರು 9 ಗಂಟೆಗಳ ಕಾಲ ಸಮಯ ಕಳೆದರು.
ಝೆಲೆನ್ಸ್ಕಿ ಅವರಿಗೆ ಪ್ರಧಾನಿ ಮೋದಿ ಆಹ್ವಾನದ ಕುರಿತು ಮಾಧ್ಯಮ ಹೇಳಿಕೆಯಲ್ಲಿ ದೃಢಪಡಿಸಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, 1992ರ ಉಕ್ರೇನ್ ದೇಶ ಸ್ವಾತಂತ್ರ್ಯಗೊಂಡ ಬಳಿಕ ಮೊದಲ ಬಾರಿಗೆ ನಮ್ಮ ಪ್ರಧಾನಿ ಭೇಟಿ ನೀಡುರುವುದು ಗಮನಾರ್ಹವಾಗಿದೆ. ಭೇಟಿ ಸಂದರ್ಭದಲ್ಲಿ ಅವರನ್ನು ನಮ್ಮ ದೇಶಕ್ಕೆ ಆಹ್ವಾನಿಸುವುದು ಸಹಜ. ಅಂತೆಯೇ ಮೋದಿ ಅವರು ಆಹ್ವಾನ ನೀಡಿದ್ದಾರೆ. ಅವರ ಅನುಕೂಲಕ್ಕೆ ತಕ್ಕಂತೆ ಉಕ್ರೇನ್ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡಬಹುದು ಎಂದು ನಿರೀಕ್ಷಿಸಲಾಗುವುದು ಎಂದಿದ್ದಾರೆ.
ಪರಸ್ಪರ ಅನುಕೂಲಕರ ಅವಕಾಶದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಮೋದಿ ಆಹ್ವಾನ ನೀಡಿದ್ದಾರೆ ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ ಝೆಲೆನ್ಸ್ಕಿ ಅಲ್ಲಿಗೆ ಪ್ರಯಾಣ ಬೆಳೆಸಲು ಸಂತೋಷ ಪಡುವುದಾಗಿ ತಿಳಿಸಿದ್ದಾರೆ.