ಕರ್ನಾಟಕ

karnataka

ETV Bharat / international

ಹಮಾಸ್​ ಎಲ್ಲಾ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡಲಿ: ಅಮೆರಿಕ ಒತ್ತಾಯ - HAMAS RELEASE HOSTAGES

ಹಮಾಸ್​ ತನ್ನ ಬಳಿಯಿರುವ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕೆಂದು ಅಮೆರಿಕ ಒತ್ತಾಯಿಸಿದೆ.

ಒತ್ತೆಯಾಳು ಬಿಡುಗಡೆಯ ದೃಶ್ಯ
ಒತ್ತೆಯಾಳು ಬಿಡುಗಡೆಯ ದೃಶ್ಯ (IANS ಸಂಗ್ರಹ ಚಿತ್ರ)

By ETV Bharat Karnataka Team

Published : Feb 9, 2025, 1:25 PM IST

ವಾಶಿಂಗ್ಟನ್(ಯುಎಸ್‌ಎ): ಹಮಾಸ್ ತನ್ನ ವಶದಲ್ಲಿರುವ ಎಲ್ಲಾ ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಒತ್ತಾಯಿಸಿದ್ದಾರೆ. ಈ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದೃಢ ನಿಲುವನ್ನು ಅವರು ಪುನರುಚ್ಚರಿಸಿದ್ದಾರೆ. ನಿನ್ನೆಯಷ್ಟೇ ಹಮಾಸ್ ಮತ್ತೆ ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರುಬಿಯೊ, "490 ದಿನಗಳ ಸೆರೆವಾಸದ ನಂತರ ಎಲಿ, ಓರ್ ಮತ್ತು ಒಹಾದ್ ಕೊನೆಗೂ ಇಸ್ರೇಲ್​ಗೆ ಮರಳಿದ್ದಾರೆ. ಹಮಾಸ್ ಈಗ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ!" ಎಂದು ಬರೆದಿದ್ದಾರೆ.

ಅಕ್ಟೋಬರ್ 7, 2023ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ನೇತೃತ್ವದ ದಾಳಿಯ ಸಮಯದಲ್ಲಿ ಅಪಹರಣಕ್ಕೊಳಗಾದ ಇಸ್ರೇಲಿ-ಜರ್ಮನ್ ಪ್ರಜೆ ಒಹಾದ್ ಬೆನ್ ಅಮಿ (56) ಹಾಗೂ ಇಸ್ರೇಲಿ ಪ್ರಜೆಗಳಾದ ಎಲಿ ಶರಾಬಿ (52) ಮತ್ತು ಆರ್ ಲೆವಿ (34) ಅವರನ್ನು ಹಮಾಸ್ ಶನಿವಾರ ಬಿಡುಗಡೆ ಮಾಡಿದೆ.

ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಪ್ರಕಾರ, ಒತ್ತೆಯಾಳುಗಳು ಮಧ್ಯ ಗಾಜಾದಿಂದ ಇಸ್ರೇಲ್​ಗೆ ಪ್ರವೇಶಿಸುವ ಮೊದಲು ಅವರನ್ನು ಐಡಿಎಫ್ ಮತ್ತು ಇಸ್ರೇಲ್ ಭದ್ರತಾ ಸಂಸ್ಥೆಗೆ ವರ್ಗಾಯಿಸಲಾಯಿತು.

ಇದಕ್ಕೂ ಮುನ್ನ, ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯ (ಐಸಿಆರ್​ಸಿ) ಮೂರು ವಾಹನಗಳು ಮಧ್ಯ ಗಾಜಾದ ದೇರ್ ಅಲ್-ಬಾಲಾಹ್​​ನಲ್ಲಿ ಗೊತ್ತುಪಡಿಸಿದ ಹಸ್ತಾಂತರದ ಸ್ಥಳಕ್ಕೆ ಆಗಮಿಸಿದವು. ಹಮಾಸ್​ನ ಮಿಲಿಟರಿ ವಿಭಾಗವಾದ ಅಲ್-ಖಾಸ್ಸಾಮ್ ಬ್ರಿಗೇಡ್ ಸದಸ್ಯರು​ ಒತ್ತೆಯಾಳುಗಳನ್ನು ಐಸಿಆರ್​ಸಿಗೆ ಹಸ್ತಾಂತರಿಸುವ ಮೊದಲು ಅವರನ್ನು ವೇದಿಕೆಗೆ ಕರೆತಂದು ಪರೇಡ್ ಮಾಡಿಸಿದರು.

ಸದ್ಯ ಬಿಡುಗಡೆಯಾಗಿರುವ ಬೆನ್ ಅಮಿ ಹಾಗೂ ಅವರ ಪತ್ನಿಯನ್ನು ಒಂದೇ ದಿನ ಅಪಹರಿಸಲಾಗಿತ್ತು. ಆದರೆ ಈ ಹಿಂದಿನ ಒತ್ತೆಯಾಳು ಬಿಡುಗಡೆ ಒಪ್ಪಂದದ ಭಾಗವಾಗಿ 54 ದಿನಗಳ ಸೆರೆವಾಸದ ನಂತರ ಪತ್ನಿಯನ್ನು ಬಿಡುಗಡೆ ಮಾಡಲಾಗಿತ್ತು ಎಂದು ವರದಿಗಳು ತಿಳಿಸಿವೆ.

ಪ್ರಸ್ತುತ ನಡೆಯುತ್ತಿರುವ ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆಯು ಯುಎಸ್ ಬೆಂಬಲದೊಂದಿಗೆ ಈಜಿಪ್ಟ್ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮ ಒಪ್ಪಂದದ ಮೊದಲ ಹಂತದ ಅಡಿಯಲ್ಲಿ ಐದನೇ ಒತ್ತೆಯಾಳು-ಕೈದಿಗಳ ವಿನಿಮಯವಾಗಿದೆ.

ಒಪ್ಪಂದದ ಭಾಗವಾಗಿ, ಇಸ್ರೇಲ್ ತನ್ನ ಜೈಲುಗಳಿಂದ 183 ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದೆ. ಬಿಡುಗಡೆಯಾದ ಕೈದಿಗಳನ್ನು ರೆಡ್ ಕ್ರಾಸ್ ಬಸ್ ಗಳ ಮೂಲಕ ಕಳುಹಿಸಲಾಗಿದ್ದು, ಅವರು ರಮಲ್ಲಾಗೆ ಆಗಮಿಸಿದ್ದಾರೆ ಎಂದು ಪ್ಯಾಲೆಸ್ಟೈನ್ ಪ್ರಿಸನರ್ಸ್ ಕ್ಲಬ್ ನ ಮುಖ್ಯಸ್ಥ ಅಬ್ದುಲ್ಲಾ ಅಲ್-ಝಾಗರಿ ಖಚಿತಪಡಿಸಿದ್ದಾರೆ. ಅವರನ್ನು ಸ್ವಾಗತಿಸಲು ದೊಡ್ಡ ಸಂಖ್ಯೆಯಲ್ಲಿ ಜನಸಮೂಹ ಸೇರಿರುವುದು ಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ.

ಇದನ್ನೂ ಓದಿ: ಆಗಸ್ಟ್‌ನಿಂದ ಬಾಂಗ್ಲಾದೇಶದಲ್ಲಿ 23 ಹಿಂದೂಗಳ ಸಾವು: 152 ದೇವಾಲಯಗಳ ಮೇಲೆ ದಾಳಿ: ಕೇಂದ್ರ ಸರ್ಕಾರ - 23 HINDUS KILLED IN BANGLA

ABOUT THE AUTHOR

...view details