ಸಿಯೋಲ್ : ಉತ್ತರ ಕೊರಿಯಾ ವಿರೋಧಿ ಬರಹಗಳ ಪ್ರಚಾರ ಕರಪತ್ರಗಳನ್ನು ದೇಶದೊಳಗೆ ಕಳುಹಿಸುವುದು ಮತ್ತು ಗಡಿಯಲ್ಲಿ ಲೌಡ್ ಸ್ಪೀಕರ್ ಮೂಲಕ ಪ್ರಚಾರ ಮಾಡುವುದನ್ನು ನಿಲ್ಲಿಸದಿದ್ದರೆ ದಕ್ಷಿಣ ಕೊರಿಯಾವು ದೊಡ್ಡ ಮಟ್ಟದ ಪ್ರತಿದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಅವರ ಸಹೋದರಿ ಎಚ್ಚರಿಸಿದ್ದಾರೆ.
ಉತ್ತರ ಕೊರಿಯಾವು ಪದೇ ಪದೇ ಕಸ ತುಂಬಿದ ಬಲೂನ್ಗಳನ್ನು ಕಳುಹಿಸುತ್ತಿರುವುದಕ್ಕೆ ಪ್ರತೀಕಾರವಾಗಿ ದಕ್ಷಿಣ ಕೊರಿಯಾವು ಆರು ವರ್ಷಗಳಲ್ಲಿ ಮೊದಲ ಬಾರಿಗೆ ಉತ್ತರ ಕೊರಿಯಾದ ವಿರುದ್ಧ ಧ್ವನಿವರ್ಧಕ ಪ್ರಸಾರವನ್ನು ಪುನಾರಂಭಿಸಿದ ನಂತರ ಕಿಮ್ ಯೋ-ಜಾಂಗ್ ಈ ಹೇಳಿಕೆ ನೀಡಿದ್ದಾರೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ಗಡಿ ಉದ್ದಕ್ಕೂ ಪ್ರಚೋದನೆ ಉಂಟು ಮಾಡಲು ಕರಪತ್ರ ಹಂಚುವಿಕೆ ಮತ್ತು ಧ್ವನಿವರ್ಧಕಗಳ ಬಳಕೆಯನ್ನು ದಕ್ಷಿಣ ಕೊರಿಯಾವು ಮುಂದುವರಿಸಿದರೆ ಅದು ನಿಸ್ಸಂದೇಹವಾಗಿ ಉತ್ತರ ಕೊರಿಯಾದಿಂದ ಹೊಸ ಪ್ರತಿದಾಳಿಗೆ ಸಾಕ್ಷಿಯಾಗಲಿದೆ" ಎಂದು ಕಿಮ್ ಭಾನುವಾರ ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಾರಾಂತ್ಯದಲ್ಲಿ ಉತ್ತರ ಕೊರಿಯಾವು ಗಡಿಯುದ್ದಕ್ಕೂ 1,400 ಬಲೂನ್ಗಳಲ್ಲಿ ಸುಮಾರು 7.5 ಟನ್ ತ್ಯಾಜ್ಯ ವಸ್ತುಗಳನ್ನು ತುಂಬಿಸಿ ಕಳುಹಿಸಿದೆ ಎಂದು ಕಿಮ್ ಹೇಳಿದ್ದಾರೆ. ಆದರೆ, ಇದರಲ್ಲಿನ ಕಾಗದದ ಚೂರುಗಳು ಯಾವುದೇ ರಾಜಕೀಯ ಬರಹಗಳನ್ನು ಹೊಂದಿಲ್ಲ ಎಂದು ಅವರು ತಿಳಿಸಿದ್ದಾರೆ.