ಕರ್ನಾಟಕ

karnataka

ETV Bharat / international

ಆಧುನಿಕ ಗುಲಾಮಗಿರಿ: ಇಟಲಿಯಲ್ಲಿ ಇಬ್ಬರು ಭಾರತೀಯರ ಬಂಧನ - Indian nationals arrested in Italy - INDIAN NATIONALS ARRESTED IN ITALY

ಭಾರತೀಯ ಮೂಲದ ಕಾರ್ಮಿಕರನ್ನು ಗುಲಾಮರನ್ನಾಗಿ ದುಡಿಸಿಕೊಂಡ ಆರೋಪದ ಮೇಲೆ ಇಟಲಿಯಲ್ಲಿ ಇಬ್ಬರು ಭಾರತೀಯರನ್ನು ಬಂಧಿಸಲಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

By PTI

Published : Jul 14, 2024, 1:07 PM IST

ರೋಮ್ :ಇಟಲಿಯ ವೆರೋನಾ ಪ್ರಾಂತ್ಯದಲ್ಲಿ 33 ಕೃಷಿ ಕಾರ್ಮಿಕರನ್ನು ಜೀತದಾಳುಗಳನ್ನಾಗಿ ಇಟ್ಟುಕೊಂಡ ಆರೋಪದ ಮೇಲೆ ಇಬ್ಬರು ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಜೀತದಾಳುಗಳೆಲ್ಲರೂ ಸಹ ಭಾರತೀಯರೇ ಎಂದು ವರದಿ ಹೇಳಿದೆ. ಕೆಲ ವಾರಗಳ ಹಿಂದೆ ಇಂಥದೇ ದೌರ್ಜನ್ಯದ ಕಾರಣದಿಂದ ಸಿಖ್ ಕಾರ್ಮಿಕನೊಬ್ಬ ಮೃತಪಟ್ಟಿದ್ದ ಎಂಬುದು ಗಮನಾರ್ಹ.

ಬಂಧಿತ ಆರೋಪಿಗಳಿಂದ ಹಣಕಾಸು ವಿಭಾಗದ ಪೊಲೀಸರು 4,75,000 ಯುರೋ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಎರಡು ಕೃಷಿ ಸಂಬಂಧಿತ ಕಂಪನಿಗಳನ್ನು ನಡೆಸುತ್ತಿದ್ದು, ದಾಖಲೆಗಳ ಪ್ರಕಾರ ಇವರು ಯಾವುದೇ ಕಾರ್ಮಿಕರನ್ನು ತಮ್ಮ ಕಂಪನಿಗಳಲ್ಲಿ ಅಧಿಕೃತವಾಗಿ ನೇಮಕ ಮಾಡಿಕೊಂಡಿಲ್ಲ ಮತ್ತು ಈ ಮೂಲಕ ಅವರು ದೇಶಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಎಎನ್ಎಸ್ಎ ಸುದ್ದಿ ಸಂಸ್ಥೆ ಶನಿವಾರ ವರದಿ ಮಾಡಿದೆ.

ಇಬ್ಬರು ಗ್ಯಾಂಗ್ ಮಾಸ್ಟರ್​ಗಳನ್ನು ಶನಿವಾರ ಬಂಧಿಸಲಾಗಿದ್ದು, ಗುಲಾಮಗಿರಿ ಮತ್ತು ಕಾರ್ಮಿಕ ಶೋಷಣೆ ಸೇರಿದಂತೆ ಇನ್ನಿತರ ಅಪರಾಧಗಳಿಗಾಗಿ ಇವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಇಟಲಿಯ ಸುದ್ದಿ ಸಂಸ್ಥೆ ತಿಳಿಸಿದೆ.

ಕಳೆದ ತಿಂಗಳು ರೋಮ್ ಬಳಿಯ ಲಾಜಿಯೊದಲ್ಲಿ ಸ್ಟ್ರಾಬೆರಿ ಕತ್ತರಿಸುವ ಯಂತ್ರಕ್ಕೆ ಕೈ ಸಿಲುಕಿ 31 ವರ್ಷದ ಸಿಖ್ ಕಾರ್ಮಿಕ ಸತ್ನಾಮ್ ಸಿಂಗ್ ಎಂಬಾತ ಗಾಯಗೊಂಡಿದ್ದ. ಈತನನ್ನು ಕಂಪನಿಯು ಕೆಲಸದಿಂದ ತೆಗೆದು ಹಾಕಿತ್ತು ಹಾಗೂ ಕೆಲ ದಿನಗಳಲ್ಲಿ ಈತ ಮೃತಪಟ್ಟಿದ್ದ. ಈ ಘಟನೆಯ ನಂತರ ಇಟಲಿಯಲ್ಲಿ ಆಧುನಿಕ ರೀತಿಯ ಗುಲಾಮಗಿರಿಯ ವಿಷಯವು ದೊಡ್ಡ ಚರ್ಚೆಯ ವಿಷಯವಾಗಿದೆ.

ಭಾರತೀಯ ಪ್ರಜೆಯಾಗಿದ್ದ ಸಿಂಗ್ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ಎಎನ್ಎಸ್ಎ ಸುದ್ದಿ ಸಂಸ್ಥೆ ಈ ಹಿಂದೆ ವರದಿ ಮಾಡಿತ್ತು. ಸಿಂಗ್ ಸಾವಿಗೆ ಕಾರಣರಾದವರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಭಾರತ ಜೂನ್ 26 ರಂದು ಇಟಲಿ ಸರ್ಕಾರಕ್ಕೆ ಮನವಿ ಮಾಡಿತ್ತು.

ದೇಶದ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಸಾವಿರಾರು ಭಾರತೀಯ ವಲಸಿಗರ ಪೈಕಿ ಒಬ್ಬನಾದ ಸತ್ನಾಮ್ ಸಿಂಗ್ ಅಮಾನವೀಯ ಕೃತ್ಯಕ್ಕೆ ಬಲಿಯಾಗಿದ್ದಾನೆ ಎಂದು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಕಳೆದ ತಿಂಗಳು ಹೇಳಿದ್ದರು. "ಇಟಲಿ ದೇಶದವರಲ್ಲದ ಜನ ಇಂಥ ಅಮಾನವೀಯ ಕೃತ್ಯಗಳನ್ನು ಎಸಗುತ್ತಿದ್ದಾರೆ. ಈ ಅನಾಗರಿಕತೆಗೆ ಕಠಿಣ ಶಿಕ್ಷೆಯಾಗಲಿದೆ" ಎಂದು ಕ್ಯಾಬಿನೆಟ್ ಸಭೆಯ ನಂತರ ಅವರು ಹೇಳಿದ್ದರು.

ಗ್ಯಾಂಗ್​​ಗಳನ್ನು ಕಟ್ಟಿಕೊಂಡು ವಲಸೆ ಕೃಷಿ ಕಾರ್ಮಿಕರನ್ನು ಹಿಂಸಾತ್ಮಕವಾಗಿ ಶೋಷಿಸುವುದು ಇಟಲಿಯಲ್ಲಿ, ವಿಶೇಷವಾಗಿ ದೇಶದ ದಕ್ಷಿಣ ಭಾಗದಲ್ಲಿ ದೀರ್ಘಕಾಲದ ಸಮಸ್ಯೆಯಾಗಿದೆ. ಇಟಲಿಯ ಮಾಧ್ಯಮ ವರದಿಗಳ ಪ್ರಕಾರ, ಲ್ಯಾಟಿನಾದಲ್ಲಿ ಸಾವಿರಾರು ವಲಸೆ ಕಾರ್ಮಿಕರು ವಾಸಿಸುತ್ತಿದ್ದಾರೆ. ಅವರಲ್ಲಿ ಬಹುತೇಕರು ಸಿಖ್ಖರಾಗಿದ್ದು, ಸ್ಥಳೀಯ ಕೃಷಿ-ಮಾಫಿಯಾದ ಕೆಳಗೆ ಇವರು ಹಣ್ಣು ಮತ್ತು ತರಕಾರಿಗಳನ್ನು ಕೀಳುವ ಕೆಲಸ ಮಾಡುತ್ತಿದ್ದಾರೆ. ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಇಟಲಿಯಲ್ಲಿ ಕೆಲಸದ ಸ್ಥಗಳಲ್ಲಿನ ಮಾರಣಾಂತಿಕ ಅಪಘಾತಗಳ ಸಂಖ್ಯೆ 4 ರಿಂದ 268 ಕ್ಕೆ ಏರಿದೆ ಎಂದು ವರ್ಕ್​ ಪ್ಲೇಸ್​ ವಿಮಾ ಸಂಸ್ಥೆ ಐಎನ್ಎಐಎಲ್ ಇತ್ತೀಚೆಗೆ ತಿಳಿಸಿದೆ. ಕಳೆದ ವರ್ಷ ಸುಮಾರು ಇಂಥ 100 ಘಟನೆಗಳು ಸಂಭವಿಸಿದ್ದವು.

ಇದನ್ನೂ ಓದಿ : ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಶಂಕಿತ ಶೂಟರ್​ ಹತ್ಯೆ - Attack on Donald Trump

ABOUT THE AUTHOR

...view details