ಜೆರುಸಲೇಂ:ಪ್ಯಾಲೆಸ್ಟೈನ್ ದೇಶ ಸ್ಥಾಪನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಸೌದಿ ಅರೇಬಿಯಾದೊಂದಿಗಿನ ಸಂಬಂಧವನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನಗಳ ಭಾಗವಾಗಿ ಪ್ಯಾಲೆಸ್ಟೈನ್ ರಾಷ್ಟ್ರ ಸ್ಥಾಪನೆಗೆ ಇಸ್ರೇಲ್ ಒಪ್ಪಿಕೊಂಡಿದೆ ಎಂಬ ವರದಿಗಳನ್ನು ನೆತನ್ಯಾಹು ತಿರಸ್ಕರಿಸಿದ್ದಾರೆ.
"ಪ್ರಧಾನಿ ನೆತನ್ಯಾಹು ಪ್ಯಾಲೆಸ್ಟೈನ್ ರಾಷ್ಟ್ರ ಸ್ಥಾಪನೆಯಾಗದಂತೆ ಪ್ರಯತ್ನಿಸಿದ್ದಾರೆ ಹಾಗೂ ಮುಂದೆಯೂ ಅದೇ ಪ್ರಯತ್ನಗಳನ್ನು ಮುಂದುವರಿಸಲಿದ್ದಾರೆ" ಎಂದು ಅವರ ಕಚೇರಿ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ. ಪ್ಯಾಲೆಸ್ಟೈನ್ ರಾಷ್ಟ್ರ ಸ್ಥಾಪನೆಯು ಇಸ್ರೇಲ್ನ ಭದ್ರತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಂಬಂಧಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಪರಿಗಣನೆ:ಸೌದಿ ಅರೇಬಿಯಾದೊಂದಿಗಿನ ಸಂಬಂಧಗಳನ್ನು ಉತ್ತಮಗೊಳಿಸಲು ನಡೆಯುತ್ತಿರುವ ಮಾತುಕತೆಗಳ ಭಾಗವಾಗಿ ಪ್ಯಾಲೆಸ್ಟೈನ್ ರಾಷ್ಟ್ರ ಸ್ಥಾಪನೆಯ ವಿಷಯವನ್ನು ಇಸ್ರೇಲ್ ಪರಿಗಣಿಸುತ್ತಿದೆ ಎಂದು ಇಸ್ರೇಲ್ ಮಾಧ್ಯಮಗಳು ಈ ಹಿಂದೆ ವರದಿ ಮಾಡಿರುವುದಾಗಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ಹೇಳಿತ್ತು.
ಏತನ್ಮಧ್ಯೆ ಸೌದಿ ಕೂಡ ಈ ವರದಿಯನ್ನು ಬಲವಾಗಿ ನಿರಾಕರಿಸಿದ್ದು, ಈ ವಿಷಯದಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ ಎಂದು ಹೇಳಿದೆ. "ಸ್ವತಂತ್ರ ಪ್ಯಾಲೆಸ್ಟೈನ್ ರಾಷ್ಟ್ರದ ಸ್ಥಾಪನೆಯಾಗಬೇಕು ಎಂಬ ತನ್ನ ನಿಲುವಿನಿಂದ ಸೌದಿ ಅರೇಬಿಯಾದ ನಾಯಕತ್ವವು ಹಿಂದೆ ಸರಿದಿದೆ ಎಂಬ ವರದಿಗಳು ಕೂಡ ಅಷ್ಟೇ ಆಧಾರರಹಿತವಾಗಿವೆ" ಎಂದು ಹೆಸರು ಹೇಳಲಿಚ್ಛಿಸದ ಸೌದಿ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.