ಟೆಹ್ರಾನ್: ಇರಾನ್ ಭೂಪ್ರದೇಶದ ಮೇಲೆ ಇತ್ತೀಚೆಗೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಖಂಡಿತವಾಗಿಯೂ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಇರಾನ್ನ ಉನ್ನತ ಮಿಲಿಟರಿ ಕಮಾಂಡರ್ ಪ್ರತಿಜ್ಞೆ ಮಾಡಿದ್ದಾರೆ ಎಂದು ಸರಕಾರಿ ಮಾಧ್ಯಮಗಳು ವರದಿ ಮಾಡಿವೆ. ಕಳೆದ ತಿಂಗಳ ಕೊನೆಯಲ್ಲಿ ಇರಾನ್ನ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ ಇರಾನ್ ವಾಯುಪಡೆ ಸದಸ್ಯರೊಬ್ಬರ ಕುಟುಂಬದೊಂದಿಗೆ ನಡೆದ ಸಭೆಯಲ್ಲಿ ಇರಾನ್ ಸೇನೆಯ ಮುಖ್ಯ ಕಮಾಂಡರ್ ಅಬ್ದುಲ್ ರಹೀಮ್ ಮೌಸವಿ ಈ ಹೇಳಿಕೆ ನೀಡಿದ್ದಾರೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಐಆರ್ಎನ್ಎ ವರದಿ ಗುರುವಾರ ತಿಳಿಸಿದೆ.
"ನಾವು ಪ್ರತಿಕ್ರಿಯೆಯ ಸಮಯ ಮತ್ತು ವಿಧಾನವನ್ನು ನಿರ್ಧರಿಸುತ್ತೇವೆ ಮತ್ತು ಅಗತ್ಯವಿದ್ದಾಗ ನಾವು ಯಾವುದೇ ಹಿಂಜರಿಕೆ ಮಾಡುವುದಿಲ್ಲ. ನಮ್ಮ ಪ್ರತಿಕ್ರಿಯೆ ಖಂಡಿತವಾಗಿಯೂ ದಮನಕಾರಿಯಾಗಲಿದೆ" ಎಂದು ಅವರು ಹೇಳಿದ್ದಾರೆ. ಇರಾನ್ನಿಂದ ಇತ್ತೀಚೆಗೆ ನಡೆದ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ನ ನೆಲೆಗಳ ಮೇಲೆ "ನಿಖರ ಮತ್ತು ಉದ್ದೇಶಿತ" ವೈಮಾನಿಕ ದಾಳಿ ನಡೆಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆಗಳು ಅಕ್ಟೋಬರ್ 26 ರಂದು ಘೋಷಿಸಿತ್ತು.
ಇಸ್ರೇಲ್ ದಾಳಿಯನ್ನು ಯಶಸ್ವಿಯಾಗಿ ಎದುರಿಸಿದ್ದು, ಇದರಿಂದ ಇರಾನ್ನಲ್ಲಿ ಅಲ್ಪ ಪ್ರಮಾಣದ ಹಾನಿಯಾಗಿದೆ ಎಮದು ಇರಾನ್ ವಾಯು ರಕ್ಷಣಾ ಪ್ರಧಾನ ಕಚೇರಿ ಹೇಳಿಕೊಂಡಿತ್ತು.
ಇರಾನ್ನ ಖಂಡಿತವಾಗಿಯೂ ಪ್ರತಿಕ್ರಿಯೆ ನೀಡಲಿದೆ’:ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಇರಾನ್ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ (ಐಆರ್ಜಿಸಿ) ಉಪ ಕಮಾಂಡರ್ ಅಲಿ ಫದವಿ, ಇಸ್ರೇಲ್ನ ಆಕ್ರಮಣಕ್ಕೆ ಇರಾನ್ನ ಖಂಡಿತವಾಗಿಯೂ ಪ್ರತಿಕ್ರಿಯೆ ನೀಡಲಿದೆ ಎಂದು ಹೇಳಿದ್ದಾರೆ ಎಂದು ಅರೆ-ಸರ್ಕಾರಿ ಮಾಧ್ಯಮ ಸಂಸ್ಥೆ ತಸ್ನಿಮ್ ವರದಿ ಮಾಡಿದೆ.
1979 ರ ಇಸ್ಲಾಮಿಕ್ ಕ್ರಾಂತಿಯ ನಂತರ, ಇರಾನ್ ಯಾವುದೇ ದುರುದ್ದೇಶಪೂರಿತ ಕೃತ್ಯಕ್ಕೆ ಉತ್ತರಿಸದೆ ಬಿಟ್ಟಿಲ್ಲ ಮತ್ತು ಇತ್ತೀಚಿನ ಇಸ್ರೇಲಿ ದಾಳಿಗೆ ಖಂಡಿತವಾಗಿಯೂ ಇರಾನ್ ದೊಡ್ಡ ಮಟ್ಟದ ಪ್ರತಿಕ್ರಿಯೆಯನ್ನು ನೀಡಲಿದೆ ಎಂದು ಫದವಿ ಹೇಳಿದರು.
ಲೆಬನಾನ್ನಲ್ಲಿ 12 ಅರೆವೈದ್ಯಕೀಯ ಸಿಬ್ಬಂದಿ ಸಾವು: ಪೂರ್ವ ಲೆಬನಾನ್ ನ ಬಾಲ್ಬೆಕ್ ಪ್ರದೇಶದ ದುರಿಸ್ ಎಂಬ ಹಳ್ಳಿಯಲ್ಲಿನ ರಕ್ಷಣಾ ತಂಡದ ಕೇಂದ್ರ ಕಚೇರಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಗರಿಕ ರಕ್ಷಣಾ ತಂಡಗಳ ಕನಿಷ್ಠ 12 ಅರೆವೈದ್ಯಕೀಯ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಗುರುವಾರ 12 ನಾಗರಿಕ ರಕ್ಷಣಾ ಸದಸ್ಯರ ಶವಗಳನ್ನು ಅವಶೇಷಗಳ ಅಡಿಯಿಂದ ಹೊರತೆಗೆಯಲಾಗಿದೆ ಎಂದು ಬಾಲ್ಬೆಕ್ ಗವರ್ನರ್ ಬಚಿರ್ ಖೋಡೋರ್ ಹೇಳಿದ್ದಾರೆ ಎಂದು ಲೆಬನಾನ್ ಸುದ್ದಿ ವೆಬ್ ಸೈಟ್ ಎಲ್ನಾಶ್ರಾ ವರದಿ ಮಾಡಿದೆ.
ಇದನ್ನೂ ಓದಿ :ಬೃಹತ್ ಸಂಖ್ಯೆಯಲ್ಲಿ ಆತ್ಮಾಹುತಿ ಡ್ರೋನ್ ತಯಾರಿಕೆಗೆ ಉ.ಕೊರಿಯಾ ನಾಯಕ ಕಿಮ್ ಜಾಂಗ್ ಆದೇಶ