ಪಡಾಂಗ್ : ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತು ಭೂಕುಸಿತದ ನಂತರ ನೀರಿನ ಮಟ್ಟ ಕಡಿಮೆಯಾಗಲು ಆರಂಭಿಸಿದೆ. ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆಯೇ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಹಲವಾರು ಮೃತರ ಶವಗಳನ್ನು ಹೊರತೆಗೆದಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಮಾನ್ಸೂನ್ ಮಳೆ ಮತ್ತು ಉಕ್ಕಿ ಹರಿಯುತ್ತಿರುವ ನದಿಗಳು ಗುರುವಾರದಿಂದ ಪಶ್ಚಿಮ ಸುಮಾತ್ರಾ ಪ್ರಾಂತ್ಯದ ಒಂಬತ್ತು ಜಿಲ್ಲೆಗಳು ಮತ್ತು ನಗರಗಳನ್ನು ಮುಳುಗಿಸಿವೆ. ಶುಕ್ರವಾರ ತಡರಾತ್ರಿ ಪೆಸಿಸಿರ್ ಸೆಲಾಟನ್ ಜಿಲ್ಲೆಯಲ್ಲಿ ನದಿಯು ಬೆಟ್ಟಗಾಡಿನ ಗ್ರಾಮಗಳ ಮೂಲಕ ಹರಿದು ಅವಾಂತರ ಸೃಷ್ಟಿಸಿತು.
ವಿದ್ಯುತ್ ಕಡಿತ, ಹಾನಿಗೊಳಗಾದ ಸೇತುವೆಗಳು, ಮಣ್ಣು ಮತ್ತು ಅವಶೇಷಗಳಿಂದ ಮುಚ್ಚಲ್ಪಟ್ಟ ರಸ್ತೆಗಳ ಕಾರಣದಿಂದ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಪೆಸಿಸಿರ್ ಸೆಲಾಟನ್ ಮತ್ತು ಅದರ ನೆರೆಯ ಪಡಂಗ್ ಪರಿಯಾಮನ್ ಜಿಲ್ಲೆಯ ಹೆಚ್ಚು ಹಾನಿಗೊಳಗಾದ ಹಳ್ಳಿಗಳಲ್ಲಿ ಅತಿ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಈ ಪ್ರದೇಶದಲ್ಲಿ ಪ್ರವಾಹದಿಂದ ಈವರೆಗೆ ಒಟ್ಟಾರೆ 26 ಜನ ಮೃತಪಟ್ಟಿದ್ದಾರೆ ಎಂದು ಏಜೆನ್ಸಿಯ ವಕ್ತಾರ ಅಬ್ದುಲ್ ಮುಹಾರಿ ತಿಳಿಸಿದ್ದಾರೆ.