ವಿಶ್ವಸಂಸ್ಥೆ: ಇಸ್ರೇಲ್-ಹಮಾಸ್ ಸಂಘರ್ಷಪೀಡಿತ ಗಾಜಾದಲ್ಲಿ ಸೋಮವಾರ ಭಾರತೀಯ ಮೂಲದ ವಿಶ್ವಸಂಸ್ಥೆಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ರಾಫಾದಲ್ಲಿ ವಾಹನದ ಮೇಲೆ ನಡೆದ ದಾಳಿಯಲ್ಲಿ ವಿಶ್ವಸಂಸ್ಥೆಯ ಓರ್ವ ಸಿಬ್ಬಂದಿ ಬಲಿಯಾದರೆ, ಮತ್ತೋರ್ವ ಗಾಯಗೊಂಡಿದ್ದಾರೆ.
ಮೃತ ಭಾರತೀಯ ಮೂಲದ ವ್ಯಕ್ತಿಯು ವಿಶ್ವಸಂಸ್ಥೆಯ ಭದ್ರತಾ ಮತ್ತು ಸುರಕ್ಷತಾ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಭಾರತದ ಮಾಜಿ ಯೋಧ ಕೂಡಾ ಹೌದು. ಆದರೆ ಗುರುತು ಬಹಿರಂಗವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಗಾಜಾದಲ್ಲಿ ಮೃತಪಟ್ಟ ವಿಶ್ವಸಂಸ್ಥೆಯ ಮೊದಲ ಸಿಬ್ಬಂದಿ: 2023ರ ಅಕ್ಟೋಬರ್ 7ರಿಂದ ಇಸ್ರೇಲ್-ಹಮಾಸ್ ಸಂಘರ್ಷ ಆರಂಭವಾದ ಬಳಿಕ ಗಾಜಾದಲ್ಲಿ ಮೃತಪಟ್ಟ ವಿಶ್ವಸಂಸ್ಥೆಯ ಮೊದಲ ಅಂತಾರಾಷ್ಟ್ರೀಯ ಸಿಬ್ಬಂದಿ ಇವರಾಗಿದ್ದಾರೆ.
'ಯುರೋಪಿಯನ್ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಗಾಜಾದಲ್ಲಿ ವಿಶ್ವಸಂಸ್ಥೆಯ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ದಾಳಿಯಾಗಿದೆ. ಓರ್ವ ಸಿಬ್ಬಂದಿ ಮೃತಪಟ್ಟು, ಮತ್ತೋರ್ವ ಗಾಯಗೊಂಡಿದ್ದಾರೆ. ಈವರೆಗೆ ಗಾಜಾದಲ್ಲಿ ವಿಶ್ವಸಂಸ್ಥೆಯ 190 ಸಿಬ್ಬಂದಿ ಸಾವನ್ನಪ್ಪಿದ್ದಾರೆ' ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೇರಸ್ ಎಕ್ಸ್ನಲ್ಲಿ ಪೊಸ್ಟ್ ಮಾಡಿದ್ದಾರೆ.
ಈ ಘಟನೆಗೆ ಗುಟೇರಸ್ ತೀವ್ರ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ, ದಾಳಿಯನ್ನು ತೀವ್ರವಾಗಿ ಖಂಡಿಸಿ ಸಂಪೂರ್ಣ ತನಿಖೆಗೂ ಆದೇಶಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ಸಂತಾಪ ಸಂದೇಶ ಕಳುಹಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವಕ್ತಾರ ಫರಾನ್ ಹಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಸಂಬಂಧಿತ ದೇಶ ಮತ್ತು ಅವರ ಕುಟುಂಬಕ್ಕೆ ಮಾಹಿತಿ ನೀಡುವ ಪ್ರಕ್ರಿಯೆಯಲ್ಲಿದ್ದೇವೆ. ಆದ್ದರಿಂದ ಅವರ ಹೆಸರು ಮತ್ತು ದೇಶದ ಮಾಹಿತಿ ನೀಡಲು ಸಾಧ್ಯವಿಲ್ಲ. ಗಾಜಾದಲ್ಲಿನ ಸಂಘರ್ಷವು ನಾಗರಿಕರ ಮೇಲೆ ಮಾತ್ರವಲ್ಲದೆ ಭದ್ರತಾ ಸಿಬ್ಬಂದಿ ಮೇಲೂ ಆಗುತ್ತಿದೆ. ತಕ್ಷಣ ಕದನ ವಿರಾಮ ಘೋಷಿಸುವಂತೆ ಮತ್ತು ಎಲ್ಲಾ ಒತ್ತೆಯಾಳುಗಳ ಬಿಡುಗಡೆಗಾಗಿ ಎಂದು ವಕ್ತಾರ ಫರಾನ್ ಹಕ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಗಾಜಾ: ಜಬಾಲಿಯಾದಲ್ಲಿ ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಮತ್ತೆ ಭುಗಿಲೆದ್ದ ಭೀಕರ ಸಂಘರ್ಷ - Israel Hamas War