ನವದೆಹಲಿ:ಉಕ್ರೇನ್ ವಿರುದ್ಧ ನಡೆಸುತ್ತಿರುವ ಯುದ್ಧದಲ್ಲಿ ರಷ್ಯಾದ ಸೇನೆಯ ಪರವಾಗಿ ಹೋರಾಟ ನಡೆಸುತ್ತಿದ್ದ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ. ಮೃತ ಮತ್ತು ಗಾಯಗೊಂಡ ಭಾರತೀಯರನ್ನು ಕೇರಳದ ಮೂಲದವರು ಎಂದು ಗುರುತಿಸಲಾಗಿದೆ. ಇಬ್ಬರೂ ರಷ್ಯಾದ ಸೇನೆ ಸೇರಿಕೊಂಡಿದ್ದರು.
ಈ ಬಗ್ಗೆ ವಿದೇಶಾಂಗ ಸಚಿವಾಲಯ ಮಾಹಿತಿ ಹಂಚಿಕೊಂಡಿದ್ದು, ಕೇರಳ ಮೂಲದ ಭಾರತೀಯ ಪ್ರಜೆ ರಷ್ಯಾ ಉಕ್ರೇನ್ ಯುದ್ಧದಲ್ಲಿ ಸಾವನ್ನಪ್ಪಿದ್ದಾನೆ. ಆತನ ದೇಹವನ್ನು ತಾಯ್ನಾಡಿಗೆ ಕಳುಹಿಸಲು ರಷ್ಯಾ ಸರ್ಕಾರಕ್ಕೆ ಕೋರಲಾಗಿದೆ ಎಂದು ಹೇಳಿದ್ದಾರೆ.
ರಷ್ಯಾದ ಸೇನೆಯಲ್ಲಿ ನೇಮಕಗೊಂಡಿರುವ ಭಾರತೀಯ ಪ್ರಜೆಗಳನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಪುಟಿನ್ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ಈಗಾಗಲೇ ಹಲವರನ್ನು ಬಿಡುಗಡೆ ಮಾಡಿದ್ದಾರೆ. ಇನ್ನುಳಿದವರ ಬಿಡುಗಡೆಗಾಗಿ ಪ್ರಯತ್ನ ಸಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.