ವಾಶಿಂಗ್ಟನ್: ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ)ನ ನಿರ್ದೇಶಕರಾಗಿ ಕಾಶ್ ಪಟೇಲ್ ಅವರ ಹೆಸರನ್ನು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಘೋಷಿಸಿದ್ದಾರೆ. ಈ ಮೂಲಕ ಭಾರತೀಯ-ಅಮೆರಿಕನ್ ಸಂಜಾತ ಪೆಂಟಗನ್ ಅಧಿಕಾರಿಯಾಗಿರುವ ಕಶ್ಯಪ್ 'ಕಾಶ್' ಪಟೇಲ್ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಅಡಿಯಲ್ಲಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ)ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಟ್ರಂಪ್ ಅವರ ನಿಷ್ಠಾವಂತ ಬೆಂಬಲಿಗರಾಗಿರುವ ಪಟೇಲ್, ಯುಎಸ್ ಸರ್ಕಾರದೊಳಗೇ ಕೆಲಸ ಮಾಡುತ್ತಿರುವ "ಆಳ ಸಂಚಿನ ಕಾರ್ಯಾಚರಣೆ" ಎಂದು ಹೇಳಲಾಗುವ ಡೀಪ್ ಸ್ಟೇಟ್ ಕಾರ್ಯಾಚರಣೆಗಳನ್ನು ನಿರ್ಮೂಲನೆ ಮಾಡುವುದಾಗಿ ಪ್ರತಿಪಾದಿಸಿದ್ದಾರೆ.
ಕಾಶ್ ಪಟೇಲ್ ಹಿನ್ನೆಲೆ: ಪೂರ್ವ ಆಫ್ರಿಕಾದ ಗುಜರಾತಿ ವಲಸಿಗ ಪೋಷಕರಿಗೆ 1980 ರಲ್ಲಿ ನ್ಯೂಯಾರ್ಕ್ನ ಕ್ವೀನ್ಸ್ನಲ್ಲಿ ಜನಿಸಿದ ಪಟೇಲ್ ಕಾನೂನು ಪದವಿ ಪಡೆದು ಫ್ಲೋರಿಡಾದಲ್ಲಿ ಸರ್ಕಾರಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಪ್ರಾಂತ್ಯ ಮತ್ತು ಫೆಡರಲ್ ನ್ಯಾಯಾಲಯಗಳಲ್ಲಿ ಕಕ್ಷಿದಾರರನ್ನು ಪ್ರತಿನಿಧಿಸಿದರು. ನಂತರ ಅವರು ಪೂರ್ವ ಆಫ್ರಿಕಾ ಮತ್ತು ಯುನೈಟೆಡ್ ಸ್ಟೇಟ್ಸ್ನಲ್ಲಿ ಅಂತರರಾಷ್ಟ್ರೀಯ ಭಯೋತ್ಪಾದನೆ ಪ್ರಕರಣಗಳಲ್ಲಿ ಪರಿಣತಿ ಹೊಂದಿರುವ ಪ್ರಾಸಿಕ್ಯೂಟರ್ ಆಗಿ ನ್ಯಾಯಾಂಗ ಇಲಾಖೆಗೆ ಸೇರಿದರು.
ಭಯೋತ್ಪಾದನೆ ನಿಗ್ರಹ ದಳಕ್ಕೆ ನೇಮಕ: ರಕ್ಷಣಾ ಇಲಾಖೆಯಲ್ಲಿ ಸರ್ಕಾರಿ ವಕೀಲರಾಗಿ ತಮ್ಮ ಅಧಿಕಾರಾವಧಿಯಲ್ಲಿ ಅವರು ಜಾಗತಿಕ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ವಿಷಯದಲ್ಲಿ ಹೆಚ್ಚಾಗಿ ಕೆಲಸ ಮಾಡಿದರು. ಕಾಂಗ್ರೆಸ್ ಸದಸ್ಯ ಡೆವಿನ್ ನ್ಯೂನ್ಸ್ ಅವರು ಕಾಶ್ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದರು. ಹೀಗಾಗಿ ನ್ಯೂನ್ಸ್ ತಾವು ಹೌಸ್ ಇಂಟೆಲಿಜೆನ್ಸ್ ಕಮಿಟಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಟೇಲ್ ಅವರನ್ನು ಭಯೋತ್ಪಾದನೆ ನಿಗ್ರಹ ವಿಭಾಗದ ಹಿರಿಯ ಸಲಹೆಗಾರರನ್ನಾಗಿ ನೇಮಿಸಿದರು.