ನವದೆಹಲಿ: ಭೀಕರ ಪ್ರವಾಹದಿಂದ ತತ್ತರಿಸಿರುವ ನೈಜೀರಿಯಾಕ್ಕೆ ಭಾರತವು ಗುರುವಾರ 15 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ. ಇದಲ್ಲದೇ ಮುಂದಿನ ದಿನಗಳಲ್ಲಿ ನೈಜೀರಿಯಾಗೆ ಇನ್ನೂ 60 ಟನ್ ಪರಿಹಾರ ಸಾಮಗ್ರಿ ಕಳುಹಿಸಲಾಗುವುದು ಎಂದು ಭರವಸೆ ನೀಡಿದೆ. ಪಶ್ಚಿಮ ಆಫ್ರಿಕಾದ ನೈಜೀರಿಯಾದಲ್ಲಿ ಪ್ರವಾಹದಿಂದ ನೂರಾರು ಜನ ಸಾವಿಗೀಡಾಗಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) "ಮಾನವೀಯ ನೆರವು ನೀಡಲು ಭಾರತ ಬದ್ಧವಾಗಿದೆ. ನೈಜೀರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹ ಪೀಡಿತರಿಗೆ ಸಹಾಯ ಮಾಡಲು ಭಾರತವು 15 ಟನ್ ಸಾಮಗ್ರಿ ಕಳುಹಿಸಿದೆ. ಇನ್ನೂ 60 ಟನ್ ನೆರವನ್ನು ಸೂಕ್ತ ಸಮಯದಲ್ಲಿ ಕಳುಹಿಸಲಾಗುವುದು." ಎಂದು ಹೇಳಿದೆ.
ಈ ಮಾನವೀಯ ನೆರವು ಆಹಾರ, ಮಲಗುವ ಚಾಪೆಗಳು, ಕಂಬಳಿಗಳು, ನೀರು ಶುದ್ಧೀಕರಣ ಉಪಕರಣಗಳು ಮತ್ತು ಇತರ ಪರಿಹಾರ ವಸ್ತುಗಳನ್ನು ಒಳಗೊಂಡಿದೆ ಎಂದು ಎಂಇಎ ಪೋಸ್ಟ್ ತಿಳಿಸಿದೆ.
ಪ್ರವಾಹಕ್ಕೆ ಕನಿಷ್ಠ 321 ಮಂದಿ ಬಲಿ:ನೈಜೀರಿಯಾದಲ್ಲಿ ಪ್ರವಾಹಕ್ಕೆ ಈ ವರ್ಷ ಇದುವರೆಗೆ ಕನಿಷ್ಠ 321 ಜನರು ಸಾವನ್ನಪ್ಪಿದ್ದಾರೆ ಮತ್ತು 7,40,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಪ್ರವಾಹದಲ್ಲಿ ಸುಮಾರು 2,854 ಜನರು ಗಾಯಗೊಂಡಿದ್ದಾರೆ. ಆಫ್ರಿಕಾದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ನೈಜೀರಿಯಾದಲ್ಲಿ ನಿರಂತರ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿದೆ ಎಂದು ಆಗ್ನೇಯ ರಾಜ್ಯ ಅನಂಬ್ರಾದ ಗವರ್ನರ್ ಚುಕ್ವುಮಾ ಸೊಲುಡೊ ಹೇಳಿದರು.
ನೈಜೀರಿಯಾದ 36 ರಾಜ್ಯಗಳ ಪೈಕಿ 34 ರಾಜ್ಯಗಳು ಪ್ರವಾಹಕ್ಕೆ ತುತ್ತಾಗಿವೆ ಮತ್ತು ದೇಶದ 774 ಸ್ಥಳೀಯ ಸರ್ಕಾರಿ ಪ್ರದೇಶಗಳ ಪೈಕಿ 217 ರಾಜ್ಯಗಳು ಬಾಧಿತವಾಗಿವೆ ಎಂದು ಹಿರಿಯ ಅಧಿಕಾರಿ ಉಲ್ಲೇಖಿಸಿದರು. ವಿನಾಶಕಾರಿ ಪ್ರವಾಹದಿಂದ ಕನಿಷ್ಠ 7,40,743 ಜನ ಸ್ಥಳಾಂತರಗೊಂಡಿದ್ದಾರೆ. 2,81,000 ಮನೆಗಳು ಹಾಳಾಗಿದ್ದು ಮತ್ತು 2,58,000 ಕೃಷಿ ಭೂಮಿಗಳು ನಾಶವಾಗಿವೆ.
"ಪ್ರವಾಹದಿಂದಾಗಿ ದೇಶದಲ್ಲಿ ತುರ್ತುಸ್ಥಿತಿ ಎದುರಾಗಿದೆ ಮತ್ತು ಇದೊಂದು ಗಂಭೀರ ವಿಪತ್ತಾಗಿದೆ. ಮಳೆಯಿಂದ ಲಕ್ಷಾಂತರ ಜನ ಸ್ಥಳಾಂತರಗೊಂಡಿದ್ದು, ಪ್ರಾಣಹಾನಿ ಮತ್ತು ಮನೆಗಳು ಮತ್ತು ಜೀವನೋಪಾಯಗಳ ನಾಶಕ್ಕೆ ಕಾರಣವಾಗಿದೆ" ಎಂದು ಆರ್ಥಿಕ ಮಂಡಳಿ ಸಭೆಯಲ್ಲಿನ ಬ್ರೀಫಿಂಗ್ ಗಳನ್ನು ಉಲ್ಲೇಖಿಸಿ ಸೊಲುಡೊ ಹೇಳಿದರು. ನೈಜೀರಿಯಾದ 200 ದಶಲಕ್ಷಕ್ಕೂ ಹೆಚ್ಚು ಜನರಲ್ಲಿ ಸರಿಸುಮಾರು ಶೇಕಡಾ 40ಕ್ಕಿಂತ ಹೆಚ್ಚು ಜನ ಅಂತರರಾಷ್ಟ್ರೀಯ ಬಡತನ ರೇಖೆಗಿಂತ ಕೆಳಗಿದ್ದಾರೆ.
ಇದನ್ನೂ ಓದಿ : ಲಾಹೋರ್ನಲ್ಲಿ ಮಾರಣಾಂತಿಕ ವಾಯುಮಾಲಿನ್ಯ: 15 ಸಾವಿರ ಜನರಿಗೆ ಉಸಿರಾಟ, ವೈರಲ್ ಸೋಂಕು