ನವದೆಹಲಿ: ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದರೂ ಭಾರತ ಈವರೆಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್ಎಸ್‌ಸಿ) ಖಾಯಂ ಸದಸ್ಯನಾಗದಿರುವುದು "ಅರ್ಥಹೀನ" ಎಂದು ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಸಿಇಒ ಎಲೋನ್ ಮಸ್ಕ್ ಟೀಕಿಸಿದ್ದಾರೆ.
ಭಾನುವಾರ ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಇದರಲ್ಲಿ ಅವರು, "ಆಫ್ರಿಕಾದ ಯಾವ ದೇಶಕ್ಕೂ ಈವರೆಗೆ ಭದ್ರತಾ ಮಂಡಳಿಯಲ್ಲಿ ಒಬ್ಬ ಖಾಯಂ ಸದಸ್ಯತ್ವ ಸಿಕ್ಕಿಲ್ಲ. ಇದನ್ನು ನಾವು ಒಪ್ಪಿಕೊಳ್ಳುವುದು ಹೇಗೆ? ಸಂಸ್ಥೆಗಳು ಇಂದಿನ ಜಗತ್ತನ್ನು ಪ್ರತಿಬಿಂಬಿಸಬೇಕು, 80 ವರ್ಷಗಳ ಹಿಂದಿನ ಜಗತ್ತನ್ನು ಪ್ರತಿಬಿಂಬಿಸಬಾರದು" ಎಂದು ಬರೆದಿದ್ದಾರೆ.
ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಲೇಖಕ ಮೈಕೆಲ್ ಐಸೆನ್ಬರ್ಗ್, " ಹಾಗಾದರೆ ಭಾರತದ ಕತೆ ಏನು? ಈಗಿನ ಪರಿಸ್ಥಿತಿಯಲ್ಲಿ ವಿಶ್ವಸಂಸ್ಥೆಯನ್ನೇ ರದ್ದು ಮಾಡುವುದು ಒಳ್ಳೆಯದು ಮತ್ತು ವಾಸ್ತವಿಕ ನಾಯಕತ್ವದ ಹೊಸ ಸಂಘಟನೆ ಸೃಷ್ಟಿಸುವುದು ಉತ್ತಮ" ಎಂದು ಹೇಳಿದ್ದರು.
ಇದಾದ ನಂತರ ಐಸೆನ್ಬರ್ಗ್ ಅವರ ಪ್ರತಿಕ್ರಿಯೆಗೆ ಉತ್ತರಿಸಿದ ಮಸ್ಕ್, "ಈ ಹಂತದಲ್ಲಿ ಯುಎನ್ ಸಂಸ್ಥೆಗಳ ಪರಿಷ್ಕರಣೆಯ ಅಗತ್ಯವಿದೆ. ಆದರೆ ಹೆಚ್ಚುವರಿ ಅಧಿಕಾರ ಹೊಂದಿರುವವರು ಅದನ್ನು ಬಿಟ್ಟುಕೊಡಲು ತಯಾರಿಲ್ಲದಿರುವುದು ಸಮಸ್ಯೆಯಾಗಿದೆ" ಎಂದು ಹೇಳಿದರು. "ಭೂಮಿಯ ಮೇಲೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದರೂ ಭಾರತವು ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನವನ್ನು ಹೊಂದಿಲ್ಲದಿರುವುದು ಅರ್ಥಹೀನವಾಗಿದೆ. ಆಫ್ರಿಕಾ ಕೂಡ ಒಟ್ಟಾಗಿ ಶಾಶ್ವತ ಸ್ಥಾನವನ್ನು ಹೊಂದಿರಬೇಕು" ಎಂದು ಅವರು ಹೇಳಿದರು.
ಯುಎನ್ಎಸ್ಸಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತವು ಹಲವಾರು ವರ್ಷಗಳಿಂದ ಹೋರಾಡುತ್ತಿದೆ. ಪ್ರಸ್ತುತ ಯುಎಸ್, ಯುಕೆ, ಫ್ರಾನ್ಸ್, ರಷ್ಯಾ ಮತ್ತು ಚೀನಾ ಯುಎನ್ಎಸ್‌ಸಿ ಯ ಐದು ಖಾಯಂ ಸದಸ್ಯ ರಾಷ್ಟ್ರಗಳಾಗಿವೆ. ಈ ಗುಂಪನ್ನು ಸಾಮಾನ್ಯವಾಗಿ 'ಪಿ 5' ಎಂದು ಕರೆಯಲಾಗುತ್ತದೆ. ಏತನ್ಮಧ್ಯೆ, ಮಸ್ಕ್ ತಮ್ಮ ಕೃತಕ ಬುದ್ಧಿಮತ್ತೆ (ಎಐ) ಕಂಪನಿ 'ಎಕ್ಸ್ಎಐ' 1 ಬಿಲಿಯನ್ ಡಾಲರ್ ಸಂಗ್ರಹಿಸುವ ಗುರಿಯ ಮಧ್ಯೆ ಈಗಾಗಲೇ 500 ಮಿಲಿಯನ್ ಡಾಲರ್ ಫಂಡಿಂಗ್ ಪಡೆದುಕೊಂಡಿದೆ ಎಂಬ ವರದಿಯನ್ನು ನಿರಾಕರಿಸಿದ್ದಾರೆ.
ಎಕ್ಸ್ಎಐ ಹೆಚ್ಚುವರಿ 500 ಮಿಲಿಯನ್ ಡಾಲರ್ ಫಂಡಿಂಗ್ಗಾಗಿ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಬ್ಲೂಮ್ಬರ್ಗ್ನ ವರದಿ ಮಾಡಿತ್ತು. ಆದರೆ ಎಲೋನ್ ಮಸ್ಕ್ ಈ ವರದಿಯನ್ನು ತಳ್ಳಿಹಾಕಿದ್ದು, ಬ್ಲೂಮ್ಬರ್ಗ್ ಸುಳ್ಳುಸುದ್ದಿ ಪ್ರಕಟಿಸಿದೆ ಎಂದು ಟ್ವಿಟರ್ನಲ್ಲಿ ಸುದ್ದಿ ಲೇಖನ ಶೇರ್ ಮಾಡಿದ್ದ ಬಳಕೆದಾರರಿಗೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ:ರೆಕ್ಕೆಯ ಬೋಲ್ಟ್ಗಳೇ ಮಾಯ: ವರ್ಜಿನ್ ಅಟ್ಲಾಂಟಿಕ್ ವಿಮಾನ ಸಂಚಾರ ರದ್ದು