ಇಸ್ಲಾಮಾಬಾದ್ (ಪಾಕಿಸ್ತಾನ) :ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಸಂಸ್ಥಾಪಕ ಇಮ್ರಾನ್ ಖಾನ್ಗೆ ಮತ್ತೊಂದು ಆಘಾತ ಎದುರಾಗಿದೆ. ರಹಸ್ಯ ದಾಖಲೆ ಸೋರಿಕೆ (cipher case) ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಜೊತೆಗೆ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿಯೂ ಆರೋಪಿ ಎಂದು ಕೋರ್ಟ್ ಹೇಳಿದೆ.
ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ನಡೆದ ವಿಚಾರಣೆಯಲ್ಲಿ ವಿಶೇಷ ಕೋರ್ಟ್ನ ನ್ಯಾಯಾಧೀಶ ಅಬುಲ್ ಹಸ್ನಾತ್ ಜುಲ್ಕರ್ನೈನ್ ಅವರು ಈ ಆದೇಶವನ್ನು ಪ್ರಕಟಿಸಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಫೆಬ್ರವರಿ 8 ರಂದು ನೆರೆಯ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲೇ ಶಿಕ್ಷೆ ಪ್ರಕಟಿಸಲಾಗಿದೆ.
ಏನಿದು ಪ್ರಕರಣ:ಇಮ್ರಾನ್ ಖಾನ್ ಅಧಿಕಾರಾವಧಿಯಲ್ಲಿ ಅಮೆರಿಕದ ವಾಷಿಂಗ್ಟನ್ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯು ಕಳುಹಿಸಿದ ಕೇಬಲ್ ಸಂದೇಶವನ್ನು ಬಹಿರಂಗಗೊಳಿಸಿ ರಹಸ್ಯ ಕಾನೂನು ಉಲ್ಲಂಘನೆ ಮಾಡಿದ ಆರೋಪ ಇಬ್ಬರ ಮೇಲಿದೆ. ಇದರ ವಿರುದ್ಧ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿಯು ಇಮ್ರಾನ್ ಖಾನ್ ಮತ್ತು ಮಹಮೂದ್ ಖುರೇಷಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಇದೀಗ ವಿಶೇಷ ಕೋರ್ಟ್ ಇಬ್ಬರನ್ನು ದೋಷಿ ಎಂದು ತೀರ್ಮಾನಿಸಿ 10 ವರ್ಷ ಜೈಲು ಶಿಕ್ಷೆಗೆ ಗುರಿ ಮಾಡಿದೆ.