ಫ್ಲೊರಿಡಾ (ಅಮೆರಿಕ): ನಾಲ್ಕು ಜನರನ್ನು ಹೊತ್ತು ಬಾಹ್ಯಾಕಾಶಕ್ಕೆ ಹಾರಬೇಕಿದ್ದ ಸ್ಪೇಸ್ ಎಕ್ಸ್ನ 'ಪೊಲಾರಿಸ್ ಡಾನ್' (Polaris Dawn) ಮಿಷನ್ ಉಡಾವಣೆಯನ್ನು ಒಂದು ದಿನ ಮುಂದೂಡಲಾಗಿದೆ. ಈಗ ಈ ಮಿಷನ್ ಆಗಸ್ಟ್ 27ರ ಬದಲಾಗಿ ಬುಧವಾರ 28 ರಂದು ಉಡಾವಣೆಯಾಗಲಿದೆ. ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಭೂಮಿಯ ಮೇಲಿನ ಉಪಕರಣಗಳಲ್ಲಿ ಹೀಲಿಯಂ ಅನಿಲ ಸೋರಿಕೆಯಾಗಿದ್ದರಿಂದ ಉಡಾವಣೆಯನ್ನು ಮುಂದೂಡಲಾಗಿದೆ ಎಂದು ಎಲೋನ್ ಮಸ್ಕ್ ನೇತೃತ್ವದ ಕಂಪನಿ ಸ್ಪೇಸ್ ಎಕ್ಸ್ ತಿಳಿಸಿದೆ.
"ಕ್ವಿಕ್ ಡಿಸ್ಕನೆಕ್ಟ್ ಭಾಗದಲ್ಲಿ ನೆಲಮಟ್ಟದ ಹೀಲಿಯಂ ಸೋರಿಕೆಯಾಗಿರುವುದನ್ನು ತಜ್ಞರ ತಂಡಗಳು ಸೂಕ್ಷ್ಮವಾಗಿ ಪರಿಶೀಲಿಸುತ್ತಿವೆ. ಫಾಲ್ಕನ್ ಮತ್ತು ಡ್ರ್ಯಾಗನ್ ಸುಸ್ಥಿತಿಯಲ್ಲಿವೆ ಮತ್ತು ಸಿಬ್ಬಂದಿಯು ಬಹು-ದಿನದ ಕೆಳ ಮಟ್ಟದ ಭೂ ಕಕ್ಷೆಗೆ ಹಾರಾಟ ನಡೆಸಲು ಸಿದ್ಧರಾಗಿದ್ದಾರೆ. ಆಗಸ್ಟ್ 28 ರ ಬುಧವಾರಕ್ಕಿಂತ ಮುಂಚೆ ಉಡಾವಣೆ ಸಾಧ್ಯವಿಲ್ಲ" ಎಂದು ಸ್ಪೇಸ್ಎಕ್ಸ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಏನಿದು 'ಪೊಲಾರಿಸ್ ಡಾನ್'? : ಸ್ಪೇಸ್ಎಕ್ಸ್ನ 'ಪೊಲಾರಿಸ್ ಡಾನ್' ಪೊಲಾರಿಸ್ ಕಾರ್ಯಕ್ರಮದ ಮೂರು ಯೋಜಿತ ಕಾರ್ಯಾಚರಣೆಗಳಲ್ಲಿ ಮೊದಲನೆಯದಾಗಿದೆ. ಇದು ಬಿಲಿಯನೇರ್ ಉದ್ಯಮಿ ಜೇರೆಡ್ ಐಸಾಕ್ ಮನ್ ಅವರು ನೀಡಿದ ಧನಸಹಾಯದಿಂದ ಮತ್ತು ಅವರೇ ಆಯೋಜಿಸಿದ, ಮಾನವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಬಾಹ್ಯಾಕಾಶ ಯೋಜನೆಯಾಗಿದೆ. ಈ ಮಿಷನ್ ಅಡಿಯಲ್ಲಿ ಮಾನವರು ಬಾಹ್ಯಾಕಾಶದಲ್ಲಿ ನಡಿಗೆಯನ್ನು ಕೈಗೊಳ್ಳಲಿದ್ದಾರೆ. ಈವರೆಗೆ ದೇಶವೊಂದರ ಸರ್ಕಾರದಿಂದ ಬಾಹ್ಯಾಕಾಶಕ್ಕೆ ಕಳುಹಿಸಲ್ಪಟ್ಟ ಗಗನಯಾತ್ರಿಗಳು ಮಾತ್ರ ಇಂಥ ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ.
ಸ್ವತಃ ಐಸಾಕ್ ಮನ್ ಅವರ ನೇತೃತ್ವದಲ್ಲಿಯೇ ಯೋಜನೆ ನಡೆಯಲಿದ್ದು, ಯುಎಸ್ ವಾಯುಪಡೆಯ ಮಾಜಿ ಲೆಫ್ಟಿನೆಂಟ್ ಕರ್ನಲ್ ಪೈಲಟ್ ಸ್ಕಾಟ್ "ಕಿಡ್" ಪೊಟೆಟ್ ಮತ್ತು ಮಿಷನ್ ಸ್ಪೆಷಲಿಸ್ಟ್ಗಳಾದ ಸಾರಾ ಗಿಲ್ಲಿಸ್ ಮತ್ತು ಅನ್ನಾ ಮೆನನ್ ಎಂಬ ಮೂವರು ಸಿಬ್ಬಂದಿಗಳು ಮಿಷನ್ನ ಕ್ರೂ ಡ್ರ್ಯಾಗನ್ ಕ್ಯಾಪ್ಸೂಲ್ನಲ್ಲಿ ಐಸಾಕ್ ಮನ್ ಜೊತೆಗಿರಲಿದ್ದಾರೆ.