ಮಾಲೆ(ಮಾಲ್ಡೀವ್ಸ್): ಮಾಲ್ಡೀವ್ಸ್‌ನಲ್ಲಿ ನಿಯೋಜಿಸಲಾದ ಭಾರತೀಯ ಸೈನಿಕರ ಮೊದಲ ತುಕಡಿಯನ್ನು ಈ ವರ್ಷದ ಮಾರ್ಚ್ 10ರೊಳಗೆ ವಾಪಸ್ ಕಳುಹಿಸಲು ಭಾರತ ಮತ್ತು ಮಾಲ್ಡೀವ್ಸ್ ಒಪ್ಪಿಕೊಂಡಿವೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಸೋಮವಾರ ಹೇಳಿದ್ದಾರೆ ಎಂದು ಮಾಲ್ಡೀವ್ಸ್ ಮೂಲದ ಸನ್ ಆನ್‌ಲೈನ್ ವರದಿ ಮಾಡಿದೆ. 19ನೇ ಸಂಸತ್ತಿನ ಕೊನೆಯ ಅಧಿವೇಶನದ ಪ್ರಾರಂಭದಲ್ಲಿ ತಮ್ಮ ಮೊದಲ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಸೈನ್ಯವನ್ನು ವಾಪಸ್ ಕಳುಹಿಸಲು ಭಾರತದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು.
ಮಾರ್ಚ್ 10, 2024ರೊಳಗೆ ಭಾರತೀಯ ಸೇನೆಯು ಮಾಲ್ಡೀವ್ಸ್ನ ಮೂರು ವಾಯುಯಾನ ಪ್ಲಾಟ್ಫಾರ್ಮ್ಗಳ ಪೈಕಿ ಒಂದರಲ್ಲಿನ ಮಿಲಿಟರಿ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲಿದೆ. ಉಳಿದ ಎರಡು ಪ್ಲಾಟ್ಫಾರ್ಮ್ನಲ್ಲಿನ ಮಿಲಿಟರಿ ಸಿಬ್ಬಂದಿ ಮೇ 10 ರೊಳಗೆ ನಿರ್ಗಮಿಸಲಿದ್ದಾರೆ ಎಂದು ಅವರು ಹೇಳಿದರು ಎಂದು ಸನ್ ಆನ್‌ಲೈನ್ ವರದಿ ಹೇಳಿದೆ. ಮಾಲ್ಡೀವ್ಸ್ ಜನರ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವುದು ಅಧ್ಯಕ್ಷನಾಗಿ ಇದು ನಮ್ಮ ಅತಿದೊಡ್ಡ ಭರವಸೆ ಎಂದು ಮುಯಿಝು ತಿಳಿಸಿದ್ದಾರೆ.
ಮಾಲ್ಡೀವ್ಸ್ನಿಂದ ವಿದೇಶಿ ಪಡೆಗಳನ್ನು ವಾಪಸ್ ಕಳುಹಿಸಲು, ಮಾಲ್ಡೀವ್ಸ್ ಸಮುದ್ರದ ಕಳೆದುಹೋದ ಭಾಗವನ್ನು ಮರಳಿ ಪಡೆಯಲು ಮತ್ತು ಮಾಲ್ಡೀವ್ಸ್ ಸಾರ್ವಭೌಮತ್ವವನ್ನು ದುರ್ಬಲಗೊಳಿಸುವ ಯಾವುದೇ ಒಪ್ಪಂದವನ್ನು ರದ್ದುಗೊಳಿಸಲು ಜನತೆ ತಮಗೆ ಜನಾದೇಶ ನೀಡಿದ್ದಾರೆ ಎಂದು ಅವರು ತಿಳಿಸಿದರು. ದಿನದ 24 ಗಂಟೆಗಳ ಕಾಲವೂ ವಿಶೇಷ ಆರ್ಥಿಕ ವಲಯವನ್ನು (ಇಇಝಡ್) ನಿರ್ವಹಿಸುವ ಸಾಮರ್ಥ್ಯದ ಮಿಲಿಟರಿಯನ್ನು ಸ್ಥಾಪಿಸುವುದಾಗಿ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಮೊಹಮ್ಮದ್ ಮುಯಿಝು ಘೋಷಿಸಿದರು.