ರಾವಲ್ಪಿಂಡಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಯಾವುದೇ ಸಾಧ್ಯತೆಯನ್ನು ಪಾಕಿಸ್ತಾನ ಸೇನೆ ತಳ್ಳಿಹಾಕಿದ್ದು, ಅವರೊಂದಿಗೆ ಮಾತುಕತೆ ನಡೆಸುವ ಎಲ್ಲಾ ಬಾಗಿಲುಗಳು ಮುಚ್ಚಿವೆ ಎಂದು ಸ್ಪಷ್ಟಪಡಿಸಿದೆ. ಸೇನೆಯ ಈ ಹೇಳಿಕೆಯು ಇಮ್ರಾನ್ ಖಾನ್ ಅವರ ರಾಜಕೀಯ ಭವಿಷ್ಯವನ್ನು ಮತ್ತು ದೇಶದ ಪ್ರಬಲ ಮಿಲಿಟರಿ ವ್ಯವಸ್ಥೆಯೊಂದಿಗೆ ಹಿಂಬಾಗಿಲ ಮಾತುಕತೆ ನಡೆಸುವ ಅವರ ಭರವಸೆಗಳನ್ನು ಅಪಾಯಕ್ಕೆ ಸಿಲುಕಿಸಿದೆ.
ಬ್ರಿಟಿಷ್ ದೈನಿಕದ ವರದಿಯ ಪ್ರಕಾರ, ಹಿರಿಯ ಮಿಲಿಟರಿ ಅಧಿಕಾರಿಗಳು ಖಾನ್ ಅವರೊಂದಿಗೆ ಯಾವುದೇ ಮಟ್ಟದಲ್ಲಿ ಮಾತುಕತೆ ನಡೆಸುವ ಆಲೋಚನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಇತ್ತೀಚೆಗೆ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಪಕ್ಷದ ಮುಖಂಡರೊಂದಿಗಿನ ಸಂವಾದದ ಸಂದರ್ಭದಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸಂಸ್ಥಾಪಕ ಇಮ್ರಾನ್ ಖಾನ್ ಸೇನೆಯ ಜೊತೆ ಮಾತುಕತೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದರು. ದೇಶದ ಮಿಲಿಟರಿ ನಾಯಕತ್ವದೊಂದಿಗೆ ಒಪ್ಪಂದ ಮಾಡಿಕೊಳ್ಳಲು ತಾವು ಈಗಲೂ ಸಿದ್ಧವಿರುವುದಾಗಿ ಖಾನ್ ತಿಳಿಸಿದ್ದರು.
ಕುತೂಹಲಕಾರಿ ಸಂಗತಿಯೆಂದರೆ, ತಾವು ಇಂದು ಬಂಧನದಲ್ಲಿರುವುದಕ್ಕೆ ಇದೇ ಮಿಲಿಟರಿ ವ್ಯವಸ್ಥೆ ಮತ್ತು ಅದರ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಅವರೇ ಕಾರಣ ಎಂದು ಖಾನ್ ಆರೋಪಿಸಿದ್ದರು. ಪಾಕಿಸ್ತಾನದಲ್ಲಿ ಯುಎಸ್ ನೇತೃತ್ವದಲ್ಲಿ ಆಡಳಿತ ಬದಲಾವಣೆಯ ಪಿತೂರಿಯ ಮೂಲಕ ಮಿಲಿಟರಿ ಆಡಳಿತವು ತನ್ನನ್ನು ಅಧಿಕಾರದಿಂದ ಹೊರಹಾಕಿದೆ ಮತ್ತು ತನ್ನ ಸರ್ಕಾರವನ್ನು ಉರುಳಿಸಿದೆ ಎಂದು ಖಾನ್ ಆರೋಪಿಸಿದ್ದರು.