ಕರ್ನಾಟಕ

karnataka

ETV Bharat / international

ಭಾರಿ ಪ್ರವಾಹ: ಉತ್ತರ ಆಸ್ಟ್ರೇಲಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಆಸ್ಟ್ರೇಲಿಯಾದ ಪಿಜನ್ ಹೋಲ್ ಮತ್ತು ಡಾಗುರಾಗಳಲ್ಲಿ ಪ್ರವಾಹದಿಂದಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

ಆಸ್ಟ್ರೇಲಿಯಾದಲ್ಲಿ ಭಾರಿ ಪ್ರವಾಹ
flooding in northern Australia

By ETV Bharat Karnataka Team

Published : Jan 20, 2024, 1:38 AM IST

ಕ್ಯಾನ್‌ಬೆರಾ(ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ಉತ್ತರ ಪ್ರಾಂತ್ಯದಲ್ಲಿ (ಎನ್​ಟಿ ) ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಸ್ಥಳೀಯರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಆಸ್ಟ್ರೇಲಿಯಾದ ಡಾರ್ವಿನ್​ನಿಂದ ದಕ್ಷಿಣಕ್ಕೆ ಸುಮಾರು 550 ಕಿ.ಮೀ ವ್ಯಾಪ್ತಿಯಲ್ಲಿರುವ ಸಣ್ಣ ಪಟ್ಟಣಗಳಾದ ಪಿಜನ್ ಹೋಲ್ ಮತ್ತು ಡಾಗುರಾ ಗಳಲ್ಲಿ ಪ್ರವಾಹ ಇರುವುದರಿಂದ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಎರಡು ಸಮುದಾಯಗಳ ಅಂದಾಜು 100 ನಿವಾಸಿಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಈ ಪ್ರದೇಶವು ಒಂದು ವಾರದವರೆಗೆ ಜಲಾವೃತವಾಗಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಎನ್​ಟಿ ಹಂಗಾಮಿ ಸಹಾಯಕ ಪೊಲೀಸ್​ ಆಯುಕ್ತ ಮ್ಯಾಟ್ ಹೊಲ್ಲಂಬಿ ತಿಳಿಸಿದ್ದಾರೆ.

ಡಾಲಿ ನದಿಯ ಪಕ್ಕದಲ್ಲಿರುವ ದೊಡ್ಡ ಪಟ್ಟಣದಲ್ಲಿರುವ ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳು ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ಡಾರ್ವಿನ್‌ನಿಂದ 130 ಕಿಮೀ ವ್ಯಾಪ್ತಿಯ ದಕ್ಷಿಣ ಪ್ರದೇಶದಲ್ಲಿನ ನೀರಿನ ಮಟ್ಟವು ಹೆಚ್ಚಾಗಿದೆ. ಪಿಜನ್ ಹೋಲ್ ನಿಂದ ಸ್ಥಳಾಂತರಗೊಂಡವರಲ್ಲಿ ಚಿಕಿತ್ಸೆ ಅಗತ್ಯ ಇರುವವರನ್ನು ಹೊರತುಪಡಿಸಿ ಉಳಿದವರನ್ನು ಕ್ಯಾಥರೀನ್​ಗೆ ಸ್ಥಳಾಂತರಿಸಲಾಗುವುದು. ಡಾಗುರಾಗುವಿನಿಂದ ಬಂದವರು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಮರಳುವವರೆಗೆ ಕಲ್ಕರಿಂಡ್ಜಿಯ ಹತ್ತಿರ ಆಶ್ರಯ ಪಡೆಯುತ್ತಾರೆ ಎಂದರು.

ಆಸ್ಟ್ರೇಲಿಯಾದ ಉತ್ತರ ಪ್ರಾಂತ್ಯದಲ್ಲಿ 200 ಮಿಮಿಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಒಎಂ ಹವಾಮಾನ ತಜ್ಞ ಮಿರಿಯಮ್ ಬ್ರಾಡ್ಬರಿ ಮಾತನಾಡಿ, ಪ್ರವಾಹದ ಅಪಾಯ ಇನ್ನೂ ಹೆಚ್ಚಾಗಿದೆ. ಈಗಾಗಲೇ ಹಲವು ದಿನಗಳಿಂದ ಸುರಿದ ಮಳೆಗೆ ಜಲಾಶಯಗಳು ಭರ್ತಿಯಾಗಿವೆ. ಉತ್ತರ ಪ್ರಾಂತ್ಯದ ಟಾಪ್ ಎಂಡ್ ಮತ್ತು ಉತ್ತರ ಒಳನಾಡಿನ ಹೆಚ್ಚಿನ ಭಾಗಗಳಲ್ಲಿ ನಾವು ಪ್ರವಾಹ ಹೆಚ್ಚಾಗುವ ನಿರೀಕ್ಷೆ ಇದೆ. ಇಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ ಎಂದರು.

ವಿಕ್ಟೋರಿಯಾ ಹೆದ್ದಾರಿ ಹಾಗೂ ಪಶ್ಚಿಮ ಆಸ್ಟ್ರೇಲಿಯಾದೊಂದಿಗೆ ಉತ್ತರ ಪ್ರಾಂತ್ಯವನ್ನು ಸಂಪರ್ಕಿಸುವ ಏಕೈಕ ಪ್ರಮುಖ ರಸ್ತೆಯನ್ನು ಪ್ರವಾಹದಿಂದಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ABOUT THE AUTHOR

...view details