ಕೈರೋ: ಗಾಜಾ ಪಟ್ಟಿಯ ಉತ್ತರ ಭಾಗದಲ್ಲಿ ಪರಿಹಾರ ಸಾಮಗ್ರಿಗಳ ಏರ್ ಡ್ರಾಪಿಂಗ್ ಮುಂದುವರೆದಿದೆ ಎಂದು ಈಜಿಪ್ಟ್ ಮಿಲಿಟರಿ ತಿಳಿಸಿದೆ. ಈಜಿಪ್ಟ್ ವಾಯುಪಡೆಯು ಇತರ ಸ್ನೇಹಪರ ರಾಷ್ಟ್ರಗಳ ಸಹಯೋಗದೊಂದಿಗೆ ಗಾಜಾ ಪಟ್ಟಿಯಲ್ಲಿನ ಸಂತ್ರಸ್ತರಿಗೆ ವಿಮಾನಗಳ ಮೂಲಕ ಪರಿಹಾರ ಸಾಮಗ್ರಿಗಳನ್ನು ಏರ್ ಡ್ರಾಪ್ ಮಾಡುತ್ತಿದೆ.
ಪ್ಯಾಲೆಸ್ಟೈನ್ ಎನ್ಕ್ಲೇವ್ನಲ್ಲಿನ ಜನರ ಸಂಕಷ್ಟಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಗಾಜಾಗೆ ಪರಿಹಾರ ಸಾಮಗ್ರಿಗಳನ್ನು ಏರ್ ಡ್ರಾಪ್ ಮಾಡುವ ಅಂತರರಾಷ್ಟ್ರೀಯ ಕಾರ್ಯಾಚರಣೆಯು ಜೂನ್ 3 ರಿಂದ ಜೂನ್ 8 ರವರೆಗೆ ನಡೆದಿದೆ ಎಂದು ಈಜಿಪ್ಟ್ ಸೇನೆ ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಉತ್ತರ ಗಾಜಾಗೆ ಪರಿಹಾರ ಸಾಮಗ್ರಿಗಳ ಪೂರೈಕೆಗಾಗಿ ರಚಿಸಲಾಗಿರುವ ಹಲವಾರು ಅರಬ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಒಕ್ಕೂಟಕ್ಕೆ ಈಜಿಪ್ಟ್ ಮಾರ್ಚ್ನಲ್ಲಿ ಸೇರಿಕೊಂಡಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈಜಿಪ್ಟ್ಗೆ ಹೊಂದಿಕೊಂಡಿರುವ ಗಾಜಾದ ರಫಾ ಗಡಿಯ ಮೂಲಕ ಈಜಿಪ್ಟ್ನಿಂದ ಪರಿಹಾರ ಸಾಮಗ್ರಿಗಳನ್ನು ಹೊತ್ತ ಲಾರಿಗಳು ಗಾಜಾಗೆ ಪ್ರವೇಶಿಸುತ್ತಿದ್ದವು. ಆದರೆ ಮೇ ಆರಂಭದಲ್ಲಿ ಈ ಭಾಗದ ಗಡಿ ಪ್ರದೇಶವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ಇಸ್ರೇಲ್ ಸೇನೆ ಗಡಿಯನ್ನು ಮುಚ್ಚಿದೆ. ಹೀಗಾಗಿ ಗಾಜಾಗೆ ನೆಲದ ಮಾರ್ಗದ ಮೂಲಕ ಈಜಿಪ್ಟ್ನಿಂದ ಪರಿಹಾರ ಸಾಮಗ್ರಿಗಳ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.