ಬೀಜಿಂಗ್(ಚೀನಾ): ಚೀನಾದ ಪಶ್ಚಿಮ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ 7.1 ತೀವ್ರತೆಯ ಭೂಕಂಪ ಜರುಗಿದೆ. ಈ ಅನಾಹುತದಿಂದ ದೊಡ್ಡ ಪ್ರಮಾಣದ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್‌ಹುವಾ ಮಾಹಿತಿ ನೀಡಿದೆ. ಅಕ್ಸು ಪ್ರಾಂತ್ಯದ ವುಶು ಕೌಂಟಿಯಲ್ಲಿ ಸ್ಥಳೀಯ ಕಾಲಮಾನ 2 ಗಂಟೆಯ ಸುಮಾರಿಗೆ ಘಟನೆ ನಡೆದಿದೆ ಎಂದು ಚೀನಾ ಭೂಕಂಪ ಸಂಪರ್ಕ ಕೇಂದ್ರವನ್ನು ಉಲ್ಲೇಖಿಸಿ ಕ್ಸಿನ್‌ಹುವಾ ವರದಿ ಮಾಡಿದೆ.
ಇನ್ನು, ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೂ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ, ಭೂಕಂಪದ ಕೇಂದ್ರಬಿಂದುವು 80 ಕಿ.ಮೀ ಆಳದಲ್ಲಿದೆ ಎಂದು ಹೇಳಿದೆ.
ನಾಲ್ವರಿಗೆ ಗಾಯ, ಕುಸಿದು ಬಿದ್ದ ಮನೆಗಳು: ಕ್ಸಿನ್‌ಜಿಯಾಂಗ್ ಉಯ್ಗುರ್ ಸ್ವಾಯತ್ತ ಪ್ರದೇಶದ ಸರ್ಕಾರವು ಅಧಿಕೃತ ವೈಬೊ ಖಾತೆಯಲ್ಲಿ, ''ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೋಸ್ಟ್ ಮಾಡಿದೆ. 47 ಮನೆಗಳು ಕುಸಿದಿವೆ. 78 ಮನೆಗಳಿಗೆ ಭಾಗಶ: ಹಾನಿಯಾಗಿದೆ. ಕೆಲವು ಕೃಷಿ ಕಟ್ಟಡಗಳು ಕುಸಿದಿವೆ. 7.1 ತೀವ್ರತೆಯ ಭೂಕಂಪವು ರಾತ್ರಿ 2 ಗಂಟೆಯ ನಂತರ ಅಕ್ಸು ಪ್ರಾಂತ್ಯದ ಮ್ಯಾಂಡರಿನ್‌ನ ವುಶಿ ಕೌಂಟಿ ಎಂದು ಕರೆಯಲ್ಪಡುವ ಉಚ್ತುರ್ಪಾನ್ ಕೌಂಟಿಯಲ್ಲಿ ಸಂಭವಿಸಿದೆ ಎಂದು ಚೀನಾ ಭೂಕಂಪ ಸಂಪರ್ಕ ಕೇಂದ್ರ ಮಾಹಿತಿ ಒದಗಿಸಿದೆ. ಸಿಸಿಟಿವಿ ನ್ಯೂಸ್ ಪ್ರಕಾರ, 200 ಜನರನ್ನು ತಕ್ಷಣವೇ ಪ್ರದೇಶದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.