ಢಾಕಾ: ರೆಮಾಲ್ ಚಂಡಮಾರುತವು ಗಂಟೆಗೆ 130 ಕಿ.ಮೀ ವೇಗದಲ್ಲಿ ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದ್ದು, ಹೆಚ್ಚಿನ ಅನಾಹುತ ತಡೆಯಲು ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತವು ಭಾನುವಾರ ಸಂಜೆ ಮತ್ತು ಮಧ್ಯರಾತ್ರಿಯ ನಡುವೆ ದೇಶದ ಕರಾವಳಿಯ ಮೇಲಿಂದ ದಾಟಲಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದ ಅಪಾಯಗಳ ಬಗ್ಗೆ ಬಾಂಗ್ಲಾದೇಶ ಹವಾಮಾನ ಇಲಾಖೆ ಭಾನುವಾರ ನಾಗರಿಕರಿಗೆ ಎಚ್ಚರಿಕೆ ನೀಡಿದೆ.
ದೇಶದ ಕರಾವಳಿ ಜಿಲ್ಲೆಗಳು ಮತ್ತು ಬಂದರುಗಳಿಗೆ ಅತಿದೊಡ್ಡ ಅಪಾಯದ ಸಂಕೇತ ಸಂಖ್ಯೆ 10ರ ಮಟ್ಟದ ಎಚ್ಚರಿಕೆ ರವಾನಿಸಲಾಗಿದೆ. ಮುಂದಿನ ಸೂಚನೆಯವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರಿಕೆ ದೋಣಿಗಳು, ಟ್ರಾಲರ್ ಗಳು ಮತ್ತು ಕಡಲ ಹಡಗುಗಳಿಗೆ ಸೂಚಿಸಲಾಗಿದೆ.
ಸ್ಥಳೀಯ ಕಾಲಮಾನ ಭಾನುವಾರ ಬೆಳಿಗ್ಗೆ 9.00 ಗಂಟೆಗೆ ಚಂಡಮಾರುತವು ದಕ್ಷಿಣ ಖುಲ್ನಾ ಪ್ರದೇಶದ ಬಾಂಗ್ಲಾದೇಶದ ಮೊಂಗ್ಲಾ ಬಂದರಿನ ದಕ್ಷಿಣಕ್ಕೆ 295 ಕಿ.ಮೀ ಮತ್ತು ಆಗ್ನೇಯ ಬಾಂಗ್ಲಾದೇಶದ ಚಟ್ಟೋಗ್ರಾಮ್ ಬಂದರಿನ ನೈಋತ್ಯಕ್ಕೆ 380 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ಬಿಎಂಡಿ ಹವಾಮಾನ ತಜ್ಞ ಕೆ.ಎಚ್. ಹಫೀಜುರ್ ರಹಮಾನ್ ಅವರು ಹೊರಡಿಸಿದ ಬುಲೆಟಿನ್ ತಿಳಿಸಿದೆ.
ಚಂಡಮಾರುತದಿಂದ ಅತ್ಯಧಿಕ ಅಪಾಯಕ್ಕೊಳಗಾಗಬಹುದಾದ ಹತ್ತು ಜಿಲ್ಲೆಗಳಿಂದ ಕನಿಷ್ಠ 8,00,000 ಜನರನ್ನು ಈಗಾಗಲೇ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಬಾಂಗ್ಲಾದೇಶದ ವಿಪತ್ತು ನಿರ್ವಹಣೆ ಮತ್ತು ಪರಿಹಾರ ಸಚಿವ ಮೊಹಮ್ಮದ್ ಮೊಹಿಬುರ್ ರಹಮಾನ್ ಕ್ಸಿನ್ಹುವಾಗೆ ತಿಳಿಸಿದ್ದಾರೆ.