ನ್ಯೂಯಾರ್ಕ್, ಅಮೆರಿಕ: ಒಂದು ಬಾಳೆಹಣ್ಣಿನ ಬೆಲೆ 5 ರಿಂದ 6 ರುಪಾಯಿ, ಅಬ್ಬಬ್ಬಾ ಎಂದರೆ 10 ರುಪಾಯಿ ಇರಬಹುದು. ಆದರೆ ಇಲ್ಲಿರುವ ಗೋಡೆ ಮೇಲೆ ಟೇಪ್ ಹಾಕಿ ಅಂಟಿಸಿರುವ ಬಾಳೆಹಣ್ಣು ಹರಾಜಿನಲ್ಲಿ 6.2 ಮಿಲಿಯನ್ ಡಾಲರ್ಗೆ (52,37,36,010 ರೂ.) ಮಾರಾಟವಾಗಿದೆ. ಈ ಮೂಲಕ ಕಲೆ ಹಾಗೂ ಮೌಲ್ಯ ಮತ್ತು ಗ್ರಹಿಕೆಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ಬುಧವಾರ ನ್ಯೂಯಾರ್ಕ್ನಲ್ಲಿ ನಡೆದ ಹರಾಜಿನಲ್ಲಿ ಕ್ರಿಪ್ಟೋಕರೆನ್ಸಿ ಉದ್ಯಮಿಯೊಬ್ಬರು ಈ ಬಾಳೆಹಣ್ಣನ್ನು ಇಷ್ಟೊಂದು ದುಬಾರಿ ಬೆಲೆ ನೀಡಿ ಖರೀದಿಸಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಬಾಳೆಹಣ್ಣು ಕೋಟಿ ಬೆಲೆ ಬಾಳುತ್ತಿದೆ. ಇದೇನು ಬೆಳ್ಳಿ, ಚಿನ್ನ ಅಥವಾ ವಜ್ರದಿಂದ ಮಾಡಿದ್ದಲ್ಲ. ನಿಜವಾದ ಬಾಳೆಹಣ್ಣೇ ಆದರೂ ಯಾಕೆ ಇಷ್ಟೊಂದು ಬೆಲೆ ಅಂತೀರಾ? ಇದು ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲನ್ (Maurizio Cattelan) ಅವರ ಕಲಾಕೃತಿ. ಈ ಕಲಾಕೃತಿಗೆ ಕಲಾವಿದ ಮೌರಿಜಿಯೋ "ಕಮೀಡಿಯನ್" ಎಂದು ಹೆಸರಿಟ್ಟಿದ್ದಾರೆ.
ಏನೀ ಕಲಾಕೃತಿಯ ಮಹತ್ವ: 2019ರಲ್ಲಿ ಮಿಯಾಮಿ ಬೀಚ್ನಲ್ಲಿ ನಡೆದ ಆರ್ಟ್ ಬಾಸೆಲ್ನಲ್ಲಿ ಮೊದಲ ಬಾರಿಗೆ ಕಲಾವಿದ ಮೌರಿಜಿಯೊ ಕ್ಯಾಟೆಲನ್, ಈ ಬಿಳಿ ಗೋಡೆಗೆ ಹಳದಿ ಬಾಳೆಹಣ್ಣನ್ನು ಟೇಪ್ನಿಂದ ಅಂಟಿಸಿದ ಕಲಾಕೃತಿಯನ್ನು ಪ್ರದರ್ಶನಕ್ಕಿಟ್ಟಿದ್ದರು. ಆಗ ನೋಡುಗರು ತಮಾಷೆಯಾಗಿದೆ ಎಂದು ವ್ಯಾಖ್ಯಾನಿಸಿ, ಕಲಾ ಸಂಗ್ರಹಕಾರರ ಮಾನದಂಡಗಳ ಮೇಲೆ ಪ್ರಶ್ನೆ ಹಾಗೂ ಟೀಕೆಗಳ ಮಳೆಯನ್ನೇ ಹರಿಸಿದ್ದರು. ಅಷ್ಟೇ ಅಲ್ಲ ಒಂದು ಹಂತದಲ್ಲಿ ಇನ್ನೊಬ್ಬ ಕಲಾವಿದ ಗೋಡೆಯಿಂದ ಬಾಳೆಹಣ್ಣನ್ನು ತೆಗೆದು ತಿಂದಿದ್ದ ಸನ್ನಿವೇಶ ನಡೆದಿತ್ತು. ಆದರೂ ಆ ಕಲಾಕೃತಿ ತುಂಬಾ ಗಮನ ಸೆಳೆದಿತ್ತು. ಇಂದು ಚರ್ಚೆ ಹಾಗೂ ಕುತೂಹಲವನ್ನು ಹುಟ್ಟುಹಾಕುವ ಆಧುನಿಕ ಕಲೆಯ ಸಾಮರ್ಥ್ಯದ ಸಂಕೇತವಾಗಿ ಉಳಿದಿದೆ. ಆದರೆ ಗ್ಯಾಲರಿಯ ಮಾಹಿತಿ ಪ್ರಕಾರ, ಆ ಕಲಾಕೃತಿಯ ಮೂರು ಆವೃತ್ತಿಗಳು $120,000 ಮತ್ತು $150,000 ನಡುವೆ ಮಾರಾಟವಾಗಿದ್ದವು.
ಇಷ್ಟೊಂದು ಹಣ ನೀಡಿ ಖರೀದಿಸಿದ್ದೇಕೆ?: ಇದೀಗ ಮತ್ತೆ ಐದು ವರ್ಷಗಳ ನಂತರ ಅದೇ ರೀತಿಯ ಕಲಾಕೃತಿಗೆ ಕ್ರಿಪ್ಟೋಕರೆನ್ಸಿ ಫ್ಲಾಟ್ಫಾರ್ಮ್ TRON ನ ಸಂಸ್ಥಾಪಕ ಜಸ್ಟಿನ್ ಸನ್ ಸೋಥೆಬಿ ಹರಾಜಿನಲ್ಲಿ ಹಿಂದಿನ ಬೆಲೆಯ 50 ಪಟ್ಟು ಹೆಚ್ಚು ಬೆಲೆ ಪಾವತಿಸಿ ಖರೀದಿಸಿದ್ದಾರೆ. ನಿಖರವಾಗಿ ಹೇಳುವುದಾದರೆ, ಸನ್ ಅವರು ಒಂದು ಬಾಳೆಹಣ್ಣನ್ನು ಗೋಡೆಯ ಟೇಪ್ನಿಂದ ಅಂಟಿಸುವ ಮತ್ತು ಅದನ್ನು ಕಮೀಡಿಯನ್ ಎಂದು ಕರೆಯುವ ಅಧಿಕಾರವಿರುವ ದೃಢೀಕರಣದ ಪ್ರಮಾಣಪತ್ರವನ್ನು ಅಷ್ಟು ಬೆಲೆ ಕೊಟ್ಟು ಖರೀದಿಸಿದಂತಾಗಿದೆ.
ನ್ಯೂಯಾರ್ಕ್ ಸೋಥೆಬಿಸ್ನಲ್ಲಿ ನಡೆದ ಹರಾಜಿನ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಬಾಳೆಹಣ್ಣನ್ನು ನೆಲದಿಂದ 160 ಸೆಂಟಿಮೀಟರ್ ಎತ್ತರದಲ್ಲಿ ಗೋಡೆಗೆ ಸಿಲ್ವರ್ ಬಣ್ಣದ ಟೇಪ್ನಿಂದ ಅಂಟಿಸಲಾಗಿದೆ. ಅದರ ಎರಡೂ ಬದಿಗಳಲ್ಲಿ ಬಿಳಿ ಕೈಗವಸುಗಳನ್ನು ಧರಿಸಿದ ಇಬ್ಬರು ಹ್ಯಾಂಡ್ಲರ್ಗಳು ನಿಂತಿದ್ದಾರೆ. ಪಕ್ಕದಲ್ಲೇ ಹರಾಜು ಕೂಗುತ್ತಿದ್ದಾರೆ. $800,000 ನಿಂದ ಪ್ರಾರಂಭವಾದ ಬಿಡ್ಡಿಂಗ್ ಕೆಲವೇ ನಿಮಿಷಗಳಲ್ಲಿ $2 ಮಿಲಿಯನ್, $3 ಮಿಲಿಯನ್, $4 ಮಿಲಿಯನ್ ದಾಟಿದೆ. ಕೊನೆಗೆ $6.2 ಮಿಲಿಯನ್‌ಗೆ ಜಸ್ಟಿನ್ ಸನ್ ಖರೀದಿಸಿದ್ದಾರೆ.
I’m thrilled to announce that I’ve bought the banana🍌 !!! @SpaceX @Sothebys I am Justin Sun, and I’m excited to share that I have successfully acquired Maurizio Cattelan’s iconic work, Comedian for $6.2 million. This is not just an artwork; it represents a cultural phenomenon… pic.twitter.com/lAj1RE6y0C
— H.E. Justin Sun 🍌 (@justinsuntron) November 21, 2024
ಹೆಚ್ಚು ಚಿಂತನೆ ಮತ್ತು ಚರ್ಚೆಗೆ ಸ್ಫೂರ್ತಿ ನೀಡುತ್ತದೆಯಂತೆ!: ಈ ಬಾಳೆಹಣ್ಣನ್ನು ಕೇವಲ ಒಂದು ಹಣ್ಣಿಗಿಂತ ಮಿಗಿಲಾಗಿ ನೋಡುವ ಜಸ್ಟಿನ್ ಸನ್, "ನಾನು ಬಾಳೆಹಣ್ಣನ್ನು ಖರೀದಿಸಿದ್ದೇನೆ ಎಂದು ಘೋಷಿಸಲು ನಾನು ರೋಮಾಂಚನಗೊಂಡಿದ್ದೇನೆ. ಮೌರಿಜಿಯೊ ಕ್ಯಾಟೆಲನ್ ಅವರ ಸಾಂಪ್ರದಾಯಿಕ ಕೃತಿಯಾದ ಕಮಿಡೀಯನ್ ಅನ್ನು $6.2 ಮಿಲಿಯನ್‌ಗೆ ಯಶಸ್ವಿಯಾಗಿ ನನ್ನದಾಗಿಸಿಕೊಂಡಿದ್ದೇನೆ ಎಂದು ಹೇಳಲು ಉತ್ಸುಕನಾಗಿದ್ದೇನೆ. ಇದು ಕೇವಲ ಕಲಾಕೃತಿಯಲ್ಲ; ಕಲೆ, ಮೇಮ್ಸ್ ಹಾಗೂ ಕ್ರಿಪ್ಟೋಕರೆನ್ಸಿ ಸಮುದಾಯದ ಪ್ರಪಂಚಗಳಿಗೆ ಕೊಂಡಿಯಾಗುವ ಸಾಂಸ್ಕೃತಿಕ ವಿದ್ಯಾಮಾನವನ್ನು ಈ ಬಾಳೆಹಣ್ಣು ಪ್ರತಿನಿಧಿಸುತ್ತದೆ. ಈ ಕಲಾಕೃತಿ ಭವಿಷ್ಯದಲ್ಲಿ ಹೆಚ್ಚು ಚಿಂತನೆ ಮತ್ತು ಚರ್ಚೆಗೆ ಸ್ಫೂರ್ತಿ ನೀಡುತ್ತದೆ. ಮತ್ತು ಇತಿಹಾಸದ ಭಾಗವಾಗುತ್ತದೆ ಎಂದು ನಾನು ನಂಬುತ್ತೇನೆ. ಬಾಳೆಹಣ್ಣಿನ ಹೆಮ್ಮೆಯ ಮಾಲೀಕರಾಗಲು ನನಗೆ ಗೌರವವಿದೆ. ಇದು ಪ್ರಪಂಚದಾದ್ಯಂತದ ಕಲಾ ಉತ್ಸಾಹಿಗಳಿಗೆ ಮತ್ತಷ್ಟು ಸ್ಫೂರ್ತಿ ಮತ್ತು ಪ್ರಭಾವ ಉಂಟುಮಾಡುವುದನ್ನು ಎದುರು ನೋಡುತ್ತಿದ್ದೇನೆ. ಮುಂಬರುವ ದಿನಗಳಲ್ಲಿ ನಾಣು ವೈಯಕ್ತಿಕವಾಗಿ ಅನನ್ಯ ಕಲಾತ್ಮಕ ಅನುಭವದ ಭಾಗವಾಗಿ ಈ ಬಾಳೆಹಣ್ಣು ತಿನ್ನುತ್ತೇನೆ. ಕಲಾ ಇತಿಹಾಸ ಮತ್ತು ಜನಪ್ರಿಯ ಸಂಸ್ಕೃತಿ ಎರಡರಲ್ಲೂ ಅದರ ಸ್ಥಾನವನ್ನು ಗೌರವಿಸುತ್ತೇನೆ" ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದುಬೈ, ಲಂಡನ್ ಅಲ್ಲ, ಈ ನಗರದಲ್ಲಿ ನಡೆಯಲಿದೆಯೇ IPL ಮೆಗಾ ಹರಾಜು?